ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿ ಸಂಚು ರೂಪಿಸಿದೆ. ಬಿಜೆಪಿಗರು ಮಾಡುತ್ತಿರುವ ಆರೋಪದಲ್ಲಿ ಹುರುಳಿಲ್ಲ, ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರ ಮಾಡುವುದೇ ಬಿಜೆಪಿಯ ಉದ್ದೇಶ. ಆದ್ದರಿಂದ ಜನಪರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬೆನ್ನಿಗೆ ನಾವೆಲ್ಲ ನಿಲ್ಲಬೇಕಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ರಾಜ್ಯಪಾಲರ ನಡೆಯನ್ನು ಖಂಡಿಸಿ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಸೋಮವಾರ ಬಿ.ಸಿ. ರೋಡಿನಲ್ಲಿ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್.ಪೂಜಾರಿ ಮಾತನಾಡಿ, ರಾಜಭವನ ಬಿಜೆಪಿ ಕಚೇರಿಯಾಗಿದೆ, ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವ ಷಡ್ಯಂತ್ರ ದೇಶವನ್ನು ಮುಳುಗಿಸುತ್ತಿರುವ ಅಮಿತ್ ಷಾ ಕಚೇರಿಯಲ್ಲಿ ನಡೆದಿದೆ ಎಂದು ಆರೋಪಿಸಿದರು.
ಕೈಕಂಬ ಪೊಳಲಿ ದ್ವಾರದಿಂದ ಬಿ.ಸಿ.ರೋಡಿನವರೆಗೆ ಪಾದಯಾತ್ರೆ ಮೂಲಕ ಆಗಮಿಸಿದ ಪ್ರತಿಭಟನಕಾರರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟಯರ್ ಹೊತ್ತಿಸಿ ಆಕ್ರೋಶ ವ್ಯಕ್ತಪಡಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಾಲಕೃಷ್ಣ ಅಂಚನ್, ಚಂದ್ರಶೇಖರ ಭಂಡಾರಿ, ಪಕ್ಷದ ಪ್ರಮುಖರಾದ ಜಿ.ಎ.ಬಾವಾ, ಅಶ್ವನಿ ಕುಮಾರ್ ರೈ, ಚಂದ್ರಪ್ರಕಾಶ್ ಶೆಟ್ಟಿ, ಪಿಯೂಸ್ ಎಲ್.ರೋಡ್ರಿಗಸ್, ಪದ್ಮಶೇಖರ್ ಜೈನ್, ಬೇಬಿ ಕುಂದರ್, ಮಾಯಿಲಪ್ಪ ಸಾಲ್ಯಾನ್, ದೇವಪ್ಪ ಕುಲಾಲ್, ಪಂಜಿಕಲ್ಲು, ಕೆ.ಸಂಜೀವ ಪೂಜಾರಿ, ಮಲ್ಲಿಕಾ ಶೆಟ್ಟಿ, ಜಯಂತಿ ವಿ.ಪೂಜಾರಿ, ಲವಿನಾ ವಿಲ್ಮಾ ಮೋರಸ್, ಐಡಾ ಸುರೇಶ್, ಧನಲಕ್ಷ್ಮೀ, ಮಧುಸೂದನ್ ಶೆಣೈ, ವೆಂಕಪ್ಪ ಪೂಜಾರಿ, ಮನೋಹರ ನೇರಂಬೋಳು, ಅಬ್ಬಾಸ್ ಅಲಿ, ಚಿತ್ತರಂಜನ್ ಶೆಟ್ಟಿ, ಸುಭಾಶ್ಚಂದ್ರ ಶೆಟ್ಟಿ, ಸುದರ್ಶನ್ ಜೈನ್, ಮಹಮ್ಮದ್ ಶರೀಫ್, ಜೆಸಿಂತ ಡಿಸೋಜಾ, ಡಾ.ರಘು, ಸದಾಶಿವ ಬಂಗೇರ, ಜೋಸ್ಪಿನ್ ಡಿಸೋಜಾ, ನಾರಾಯಣ ನಾಯ್ಕ ಮತ್ತಿತರರು ಇದ್ದರು.