ಮಾದರಿ ವಾರ್ಡ್ ಅಭಿಯಾನ : ಬಂಟ್ವಾಳ ಪುರಸಭೆಯಲ್ಲಿ ಸ್ವಚ್ಛತೆಯತ್ತ ನಮ್ಮ ಚಿತ್ತ ಪರಿಕಲ್ಪನೆ : ಪರ್ಲಿಯಾ ಪರಿಸರದಲ್ಲಿ ಆರಂಭ

ABHIYANA 2
ಪರ್ಲಿಯಾದ ಅಪಾರ್ಟ್‌ಮೆಂಟ್‌ನಲ್ಲಿ ಮಾದರಿ ವಾರ್ಡ್ ಹಾಗೂ ಶೂನ್ಯ ತ್ಯಾಜ್ಯ ವಸತಿ ಸಂಕೀರ್ಣ ಯೋಜನೆಗೆ ಚಾಲನೆ ನೀಡಲಾಯಿತು.
Published on

ಬಂಟ್ವಾಳ: ಪುರಸಭಾ ವ್ಯಾಪ್ತಿಯನ್ನು ಸ್ವಚ್ಛ-ಸುಂದರ ಪ್ರದೇಶವನ್ನಾಗಿ ಮಾಡಲು ಪುರಸಭೆ ಹಲವಾರು ಯೋಜನೆ ಹಾಕಿಕೊಂಡು ಕಾರ್ಯೋನ್ಮುಖವಾಗಿದೆ. ಇದೀಗ ಬಂಟ್ವಾಳ ಸ್ವಚ್ಛತೆಯತ್ತ-ನಮ್ಮ ಚಿತ್ತ ಎನ್ನುವ ಪರಿಕಲ್ಪನೆಯಡಿ ಮೊದಲ ಹಂತದಲ್ಲಿ ಮಾದರಿ ವಾರ್ಡ್ ಹಾಗೂ ಶೂನ್ಯ ತ್ಯಾಜ್ಯ ವಸತಿ ಸಂಕೀರ್ಣ ಎನ್ನುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಪ್ರಾಯೋಗಿಕವಾಗಿ ಬಿ.ಮೂಡ ಗ್ರಾಮದ 13ನೇ ಕಂದಾಯ ವಾರ್ಡನ್ನು ಈ ಯೋಜನೆಗೆ ಆಯ್ದುಕೊಳ್ಳಲಾಗಿದೆ. ಈ ಮಹತ್ವಾಕಾಂಕ್ಷಿ ಯೋಜನೆ ಯಶಸ್ವಿಯಾಗುವ ನಿಟ್ಟಿನಲ್ಲಿ ಪುರಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ತಮ್ಮ ಬಿಡುವಿನ ವೇಳೆಯಲ್ಲಿ ಸ್ವತಃ ಮನೆ ಭೇಟಿಯ ಮೂಲಕ ಕ್ಷೇತ್ರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಮಾದರಿ ವಾರ್ಡ್ ಅಭಿಯಾನಕ್ಕೆ ಚಾಲನೆ

ಪುರಸಭೆಯ 13ನೇ ವಾರ್ಡ್‌ನಲ್ಲಿರುವ ಪರ್ಲಿಯಾ ಪರಿಸರದಲ್ಲಿ ಸೋಮವಾರ ಮಾದರಿ ವಾರ್ಡ್ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಇಲ್ಲಿನ ಕಾಂಚನ-ರಚನಾ ಅಪಾರ್ಟ್‌ಮೆಂಟ್‌ನಲ್ಲಿ ಸ್ವಚ್ಛತೆಯ ಮಾಹಿತಿ ಕರಪತ್ರವನ್ನು ಬಿಡುಗಡೆ ಮಾಡುವ ಮೂಲಕ ಮಾದರಿ ವಾರ್ಡ್ ಹಾಗೂ ಶೂನ್ಯ ತ್ಯಾಜ್ಯ ವಸತಿ ಸಂಕೀರ್ಣ ಅಭಿಯಾನ ಆರಂಭಿಸಲಾಯಿತು.

ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ಸ್ವಚ್ಛತಾ ರಾಯಭಾರಿ ಸಂದೀಪ್ ಸಾಲ್ಯಾನ್, ಆರೋಗ್ಯ ನಿರೀಕ್ಷಕ ರತ್ನಪ್ರಸಾದ್, ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೋ, ಸಮುದಾಯ ಸಂಘಟಕಿ ಉಮಾವತಿ, ಅಪಾರ್ಟ್‌ಮೆಂಟ್‌ನ ಸಮಿತಿ ಅಧ್ಯಕ್ಷೆ ನಮ್ರತಾ ಭಟ್, ಮಾಜಿ ಅಧ್ಯಕ್ಷ ಜಗನ್ನಾಥ ರೈ ಮೇರಾವು, ಅಪಾರ್ಟ್‌ಮೆಂಟ್ ನಿವಾಸಿಗಳು ಹಾಗೂ ಪುರಸಭೆಯ ಸಿಬ್ಬಂದಿ ಉಪಸ್ಥಿತರಿದ್ದರು.

ಬಳಿಕ ಸ್ಥಳೀಯ ಮನೆಗಳಿಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ತೆರಳಿ ಕರಪತ್ರ ನೀಡಿ ಸ್ವಚ್ಛತೆಯ ಅರಿವು ಮೂಡಿಸುವುದರೊಂದಿಗೆ ಮಾದರಿ ವಾರ್ಡ್ ಅಭಿಯಾನಕ್ಕೆ ಸಹಕಾರ ನೀಡುವಂತೆ ಮನವಿ ಮಾಡಿದರು.

ರಾಷ್ಟ್ರೀಯ ಹೆದ್ದಾರಿ ಬದಿ ಜಾಗೃತಿ ಫಲಕ

ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿಯ ಬದಿಗಳು ಕಸ ಎಸೆಯುವ ತಾಣಗಳಾಗುತ್ತಿವೆ. ಇದೀಗ ಬಿ.ಸಿ.ರೋಡು-ಅಡ್ಡಹೊಳೆ ರಸ್ತೆ ಚತುಷ್ಪಥ ಹೆದ್ದಾರಿಯಾಗಿ ಅಭಿವೃದ್ಧಿಯಾಗುತ್ತಿದ್ದು, ಆರಂಭಿಕ ಹಂತದಲ್ಲಿ ಬಿ.ಸಿ.ರೋಡ್‌ನ ಮುಖ್ಯವೃತ್ತದ ಬಳಿಯಿಂದ ನೇತ್ರಾವತಿ ಹೊಸ ಸೇತುವೆಯವರೆಗೆ ಸ್ವಚ್ಛತೆಯ ಜಾಗೃತಿ ಫಲಕಗಳನ್ನು ಅಳವಡಿಸಿ ತ್ಯಾಜ್ಯ ಬೀಳದಂತೆ ಎಚ್ಚರಿಕೆವಹಿಸುವ ಯೋಜನೆಯನ್ನು ಬಂಟ್ವಾಳ ಪುರಸಭೆ ಹಾಕಿಕೊಂಡಿದೆ.

ಸ್ವಚ್ಛತೆ ಜಾಗೃತಿಯ ಮಾಹಿತಿ ಫಲಕ.
ಸ್ವಚ್ಛತೆ ಜಾಗೃತಿಯ ಮಾಹಿತಿ ಫಲಕ.

ಸಿಬ್ಬಂದಿಗಳಿಗೆ ಸಮವಸ್ತ್ರ

ಸ್ವಚ್ಛತಾ ಮಾಹಿತಿ ನೀಡುವ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುವ ಪುರಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಮವಸ್ತ್ರ ಧರಿಸಿ ಗಮನ ಸೆಳೆದರು. ನಸುನೇರಳೆ ಬಣ್ಣದ ಅಂಗಿ ಹಾಗೂ ಕಪ್ಪು ಪ್ಯಾಂಟ್ ಅದೇ ರೀತಿ ಮಹಿಳಾ ಸಿಬ್ಬಂದಿ ಅದೇ ಬಣ್ಣದ ಟಾಪ್ ಹಾಗೂ ಪ್ಯಾಂಟ್ ಧರಿಸಲಿದ್ದಾರೆ. ಕಚೇರಿ ಅವಧಿಯಲ್ಲೂ ವಾರಕ್ಕೊಂದು ದಿನ ಸಮವಸ್ತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಸಹಿತ ಎಲ್ಲಾ ಅಧಿಕಾರಿಗಳು ಸಿಬ್ಬಂದಿಗಳೊಂದಿಗೆ ಸಮವಸ್ತ್ರದಲ್ಲಿ ಜತೆಯಾದರು.

ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ. ಇದೀಗ ಪುರಸಭೆಯ 13ನೇ ವಾರ್ಡ್‌ನಲ್ಲಿ ಮಾದರಿ ವಾರ್ಡ್ ಹಾಗೂ ಶೂನ್ಯ ತ್ಯಾಜ್ಯ ವಸತಿ ಸಂಕೀರ್ಣ ಎನ್ನುವ ವಿಶೇಷ ಕಾರ್ಯಕ್ರಮವನ್ನು ಹಾಕಿಕೊಂಡು ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯೋನ್ಮುಖರಾಗಿದ್ದೇವೆ. - ಲೀನಾ ಬ್ರಿಟ್ಟೋ, ಮುಖ್ಯಾಧಿಕಾರಿ ಬಂಟ್ವಾಳ ಪುರಸಭೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net