ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ರಾಷ್ಟ್ರೀಯ ಹೆದ್ದಾರಿ 66ರ ಅವೈಜ್ಞಾನಿಕ ಕಾಮಗಾರಿ ಕಾರಣದಿಂದ ಉಚ್ಚಿಲ ಪೇಟೆಯಲ್ಲಿ ನಿರಂತರ ಅಪಘಾತಗಳು ನಡೆಯುತ್ತಲೇ ಇದ್ದು, ಈ ಹಿನ್ನೆಲೆಯಲ್ಲಿ ಉಚ್ಚಿಲ ನಾಗರಿಕ ಹೋರಾಟ ಸಮಿತಿ ವತಿಯಿಂದ ಉಚ್ಚಿಲ ಪೇಟೆಯಲ್ಲಿ ಸೋಮವಾರ ಪ್ರತಿಭಟನಾ ಸಭೆ ನಡೆಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.
ಪ್ರತಿಭಟನಾ ಸ್ಥಳಕ್ಕೆ ಅಧಿಕಾರಿಗಳು ಗೈರಾಗಿದ್ದು, ಈ ಹಿನ್ನೆಲೆಯಲ್ಲಿ ಸಮಿತಿ ಸದಸ್ಯರು ಹತ್ತು ನಿಮಿಷಗಳ ಕಾಲ ಹೆದ್ದಾರಿ ತಡೆ ನಡೆಸಿ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು. ಕೊನೆಗೂ ಪಡುಬಿದ್ರಿ ಎಸ್‌ಐ ಪ್ರಸನ್ನ ಎಂ.ಎಸ್ ಪ್ರತಿಭಟನಾಕಾರರನ್ನು ಮನವೊಲಿಸುವಲ್ಲಿ ಯಶಸ್ವಿಯಾದರು.
ಕೊನೆಗೂ ಸ್ಥಳಕ್ಕೆ ಬಂದ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಜಾವೇದ್ ಅವರನ್ನು ತರಾಟೆಗೆ ತೆಗೆದುಕೊಂಡ ಪ್ರತಿಭಟನಾಕಾರರು ಕೂಡಲೇ ಸಮಸ್ಯೆ ಪರಿಹರಿಸದಿದ್ದಲ್ಲಿ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದರು. ತಹಸೀಲ್ದಾರ್ ಪ್ರತಿಭಾ ಅರ್.ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ ಶೀಘ್ರದಲ್ಲೇ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಹೆದ್ದಾರಿ ಸುರಕ್ಷತಾ ಸಭೆ ಕರೆದು ಇಲ್ಲಿನ ಸಮಸ್ಯೆ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಬಡಾ ಗ್ರಾಪಂ ಅಧ್ಯಕ್ಷ ಶಿವಕುಮಾರ್ ಮೆಂಡನ್, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಶೇಖರ್ ಹೆಜಮಾಡಿ, ಎಂ.ಎ.ಗಫೂರ್, ಹನೀಫ್ ಮೂಳೂರು ಮಾತನಾಡಿದರು. ಬಡಾ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ದೀಪಕ್, ಮಜೀದ್, ರಜಾಕ್, ರಾಘವ ಕೋಟ್ಯಾನ್, ಮುಸ್ತಫಾ ಸಅದಿ, ಸುಕೇಶ್ ಎರ್ಮಾಳು, ಶೇಖಬ್ಬ, ಸಿರಾಜ್, ವೇದವ್ಯಾಸ್, ಸುಕುಮಾರ್, ಜಲಾಲ್, ಧೀರಜ್ ಹುಸೈನ್, ಸುಹೈಬ್ ಪಾಲ್ಗೊಂಡಿದ್ದರು. ಪ್ರತಿಭಟನೆಗೆ ಉಚ್ಚಿಲ ಪೇಟೆಯ ಎಲ್ಲ ವ್ಯಾಪಾರಿಗಳು ಅಂಗಡಿ ಮುಚ್ಚುವ ಮೂಲಕ ಬೆಂಬಲ ಸೂಚಿಸಿದರು. ರಿಕ್ಷಾ ಚಾಲಕರೂ ಕೈಜೋಡಿಸಿದರು. ಇದೇ ಮಾರ್ಗವಾಗಿ ಸಂಚರಿಸುತಿದ್ದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕ ಯಶಪಾಲ್ ಸುವರ್ಣ ಅವರಿಗೂ ಮನವಿ ಸಲ್ಲಿಸಲಾಯಿತು.
ಉಚ್ಚಿಲ ಪೇಟೆಯಲ್ಲಿ ಕ್ರಾಸಿಂಗ್ ವ್ಯವಸ್ಥೆ, ಎರ್ಮಾಳಿನಿಂದ ಮೂಳೂರುವರೆಗೆ ಹೆದ್ದಾರಿ ಮಧ್ಯೆ ಬೀದಿದೀಪ ಅಳವಡಿಕೆ, ಉಚ್ಚಿಲ ಪೇಟೆಯಲ್ಲಿ ಹೈಮಾಸ್ಕ್ ದೀಪ ಅಳವಡಿಕೆ, ಹೆದ್ದಾರಿಯಲ್ಲಿ ಜೀಬ್ರಾ ಕ್ರಾಸಿಂಗ್, ಸಮರ್ಪಕ ಕ್ರಾಸಿಂಗ್ ವ್ಯವಸ್ಥೆ, ಸರ್ವಿಸ್ ರಸ್ತೆ ಡಿವೈಡರಿಗೆ ಸ್ಪೀಡ್ ಬ್ರೇಕರ್ ಅಳವಡಿಸುವಂತೆ ಬೇಡಿಕೆ ಸಲ್ಲಿಸಲಾಯಿತು.