ಬೆಂಗಳೂರು: ನಗರದ ಸಿದ್ದಾಪುರ ಬಳಿಯ ಸೋಮೇಶ್ವರ ನಗರದಲ್ಲಿ ಮುಸ್ಲಿಂ ಯುವಕರ ಗುಂಪು ಸಾರ್ವಜನಿಕವಾಗಿ ಮಾರಕಾಸ್ತ್ರಗಳನ್ನು ಹಿಡಿದು ಝಳಪಿಸಿ ನೃತ್ಯ ಮಾಡಿದ್ದ ವಿಡಿಯೋ ವೈರಲ್ ಆಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 18 ಮಂದಿಯನ್ನು ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಈದ್ ಮಿಲಾದ್ ಅಂಗವಾಗಿ ಅ.9ರಂದು ರಾತ್ರಿ ಸೋಮೇಶ್ವರ ನಗರದ 7ನೇ ಅಡ್ಡರಸ್ತೆಯಲ್ಲಿ ನಡೆದ ಮೆರವಣಿಗೆ ವೇಳೆ ಮುಸ್ಲಿಂ ಯುವಕರು ಡಿಜೆ ಸಂಗೀತಕ್ಕೆ ತಕ್ಕಂತೆ ತಲ್ವಾರ್, ಮಚ್ಚು, ಚಾಕುಗಳನ್ನು ಪ್ರದರ್ಶಿಸಿ ನೃತ್ಯ ಮಾಡಿದ್ದರು. ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು, ಹಿಂದೂಗಳ ವಿರುದ್ಧ ನೀಡಿದ್ದ ಅವಹೇಳನಕಾರಿ ಹೇಳಿಕೆಗೆ ಯುವಕರು ಡಿಜೆ ಸಂಗೀತ ಸಂಯೋಜಿಸಿ ನೃತ್ಯ ಮಾಡಿ, ಅದರ ದೃಶ್ಯಾವಳಿಯನ್ನು ಫೇಸ್‌ಬುಕ್ ಖಾತೆಗಳಲ್ಲಿ ಹಾಕಿದ್ದರು. ಈ ವಿಡಿಯೋ ವೈರಲ್ ಆಗಿತ್ತು.
ಸಾರ್ವಜನಿಕರ ಆಕ್ರೋಶ: ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಗೃಹ ಸಚಿವರೇ ನಿಮ್ಮ ಪೊಲೀಸ್ ಇಲಾಖೆ ಏನು ಮಾಡುತ್ತಿದೆ? ಈ ಸಣ್ಣ ಹುಡುಗರ ಕೈಗೆ ಲಾಂಗು ಮಚ್ಚು ಎಲ್ಲಿಂದ ಬಂತು? ಇಷ್ಟು ರಾಜಾರೋಷವಾಗಿ ನಡುರಸ್ತೆಯಲ್ಲಿ ಲಾಂಗು-ಮಚ್ಚು ಹಿಡಿದುಕೊಂಡು ಡ್ಯಾನ್ಸ್ ಮಾಡುತ್ತಿದ್ದರೂ, ನಿಮ್ಮ ಪೊಲೀಸ್ ಇಲಾಖೆ ಏನು ಮಾಡುತ್ತಿತ್ತು ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದರು.
ಬಂಧಿತರ ಆರೋಪಿಗಳ ಪೈಕಿ 13 ಮಂದಿ ಕಾನೂನಿನ ಎದುರು ಸಂಘರ್ಷಕ್ಕೆ ಒಳಪಟ್ಟವರಾಗಿದ್ದು, ಅವರನ್ನು ಪರಿವೀಕ್ಷಣಾ ಮಂದಿರಕ್ಕೆ ಕಳುಹಿಸಲಾಗಿದೆ. ಉಳಿದ ಐವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗಳೆಲ್ಲ ಸೋಮೇಶ್ವರನಗರ ನಿವಾಸಿಗಳಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಅವರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲು ನಿರ್ಧರಿಸಿದ್ದೇವೆ. | ಕೃಷ್ಣಕಾಂತ್, ದಕ್ಷಿಣ ವಿಭಾಗದ ಡಿಸಿಪಿ
ಇದರಿಂದ ಎಚ್ಚೆತ್ತ ಸಿದ್ದಾಪುರ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಯುವಕರ ನೃತ್ಯದ ದೃಶ್ಯಾವಳಿ ಆಧರಿಸಿ, ಸೋಮವಾರ ರಾತ್ರಿಯಿಂದಲೇ ಕಾರ್ಯಾಚರಣೆ ನಡೆಸಿ ಐವರು ಯುವಕರನ್ನು ಬಂಧಿಸಿ 13 ಮಂದಿ ಅಪ್ರಾಪ್ತರನ್ನು ಮಂಗಳವಾರ ವಶಕ್ಕೆ ಪಡೆದಿದ್ದಾರೆ. ಬಂಧಿತರ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ, ಕಾನೂನುಬಾಹಿರವಾಗಿ ಗುಂಪುಗೂಡುವಿಕೆ, ಸಾರ್ವಜನಿಕ ಸ್ಥಳದಲ್ಲಿ ಮಾರಕಾಸ್ತ್ರಗಳ ಪ್ರದರ್ಶನ, ಧಾರ್ಮಿಕ ಭಾವನೆ ಮತ್ತು ಮಹಿಳೆಯರ ಗೌರವಕ್ಕೆ ಧಕ್ಕೆ ತಂದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.