ಕೊಲೆ ಮಾಡಿ ಶವ ರೈಲ್ವೇ ಹಳಿ ಮೇಲೆ ಎಸೆಯಲು ಹೋದ್ರು; ಆಮೇಲಾಗಿದ್ದು ಮಾಡಿದ್ದುಣ್ಣೋ ಮಹಾರಾಯ!

Railway
Published on

ಹಾಸನ: ಇದೊಂದು ಪಕ್ಕಾ ಹಳಿ ತಪ್ಪಿದ ಐಡಿಯಾ ಎಂದರೂ ತಪ್ಪೇನಲ್ಲ. ಕೊಲೆ ಮಾಡಿದ ಬಳಿಕ ಶವವನ್ನು ರೈಲ್ವೇ ಹಳಿ ಮೇಲೆ ಎಸೆಯುವ ಐಡಿಯಾ ಮಾಡಿ ಅದರಂತೆ ನಡೆದುಕೊಂಡಿದ್ದೇನೋ ನಿಜ. ಆದರೆ ಆಮೇಲಿನದ್ದು ಮಾತ್ರ ಮಾಡಿದ್ದುಣ್ಣೋ ಮಹಾರಾಯ ಎನ್ನುವಂತಾಗಿದೆ.

ಇಂಥದ್ದೊಂದು ಪ್ರಕರಣ ಹಾಸನ ಜಿಲ್ಲೆಯಲ್ಲಿ ನಡೆದಿದ್ದು, ಕೊಲೆ ಆರೋಪಿಗಳು ಪರಾರಿಯಾಗಿ ತಲೆಮರೆಸಿಕೊಳ್ಳುವ ಮೊದಲೇ ಪೊಲೀಸರ ಕೈಗೆ ತಾವಾಗಿಯೇ ಸಿಕ್ಕಿಬಿದ್ದಂತಾಗಿದೆ. ಹಾಸನದ ಶಾಂತಿಗ್ರಾಮದಲ್ಲಿ ಈ ಘಟನೆ ನಡೆದಿದೆ. ಶಾಂತಿಗ್ರಾಮದ ಗಾಡೇನಹಳ್ಳಿ ಡಾಬಾದಲ್ಲಿ ಕೆಲಸ ಮಾಡುತ್ತಿದ್ದ ಆನಂದ್ ಕೊಲೆಯಾದ ವ್ಯಕ್ತಿ. ಈತನನ್ನು ಮೂವರು ಸೇರಿ ಕೊಲೆ ಮಾಡಿದ್ದು, ಶವವನ್ನು ರೈಲ್ವೇ ಹಳಿ ಮೇಲೆ ಎಸೆಯಲು ಹೋಗಿದ್ದರು.

ಆರೋಪಿಗಳು ಪಾನಮತ್ತರಾಗಿ ಈ ಕೃತ್ಯ ಎಸಗಲು ಹೋಗಿದ್ದು, ಈ ಸಂದರ್ಭದಲ್ಲಿ ವಾಹನ ಪಲ್ಟಿಯಾಗಿ 20 ಅಡಿ ಎತ್ತರದಿಂದ ಅದೇ ರೈಲ್ವೇ ಟ್ರ್ಯಾಕ್ ಮೇಲೆ ಬಿದ್ದಿದೆ. ಈ ಅಪಘಾತದಲ್ಲಿ ಚಾಲಕ ಹಾಗೂ ಇನ್ನೊಬ್ಬನಿಗೆ ಗಂಭೀರವಾಗಿ ಗಾಯವಾಗಿದೆ. ಶಾಂತಿಗ್ರಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದ್ದು, ಸ್ಥಳಕ್ಕೆ ಸಿಪಿಐ ಮತ್ತು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಆರೋಪಿಗಳು ಯಾವ ಕಾರಣಕ್ಕೆ ಆನಂದ್​ನನ್ನು ಕೊಲೆ ಮಾಡಿದ್ದಾರೆ ಎಂಬಿತ್ಯಾದಿ ವಿಷಯ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net