

ಬಿಹಾರ: ಇದು ವಿಶೇಷ ಸೆಲ್, ಇಂಥ ಒಂದೊಂದು ಸೆಲ್ನಲ್ಲೂ 2 ಬೆಡ್, ಒಂದು ಸೋಫಾ, ಮೇಜು ಹಾಗೂ ರಕ್ಷಣೆಗೆಂದು ಗೇಟ್ ಬಳಿ ತರಬೇತಾದ ನಾಯಿ.
- ಹೌದು.. ಹೀಗಿದ್ದೊಂದು ಸೆಲ್ ಅರ್ಥಾತ್ ಸೆರಮನೆ ಇರುವುದು ಸಾರ್ವಜನಿಕವಾಗಿ ಮದ್ಯಪಾನ ಮಾಡಿ ಸಿಕ್ಕಿಬಿದ್ದ ವಿಐಪಿಗಳಿಗಾಗಿ. ಸರ್ಕಾರಿ ಅಧಿಕಾರಿಗಳು, ವಿಐಪಿಗಳು, ಜನಪ್ರತಿನಿಧಿಗಳು ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಿದ್ದು ಕಂಡುಬಂದರೆ ಅವರನ್ನು ಕರೆದುಕೊಂಡು ಬಂದು ಈ ಸೆಲ್ನಲ್ಲಿ ಇರಿಸಲಾಗುತ್ತದೆ.
ಇಂಥದ್ದೊಂದು ಸೆರಮನೆ ಇರುವುದು ಬಿಹಾರದ ಸಮಷ್ಟಿಪುರದಲ್ಲಿ. ಬಿಹಾರದ ಅಬಕಾರಿ ಇಲಾಖೆಯು ಸಮಷ್ಟಿಪುರದಲ್ಲಿ ವಿಐಪಿಗಳಿಗೆಂದೇ ಹೀಗೊಂದು ವಿಐಪಿ ಸೆಲ್ ವ್ಯವಸ್ಥೆ ಮಾಡಿದೆ. ಸರ್ಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳು ಇಲ್ಲವೇ ಯಾವುದೇ ಗಣ್ಯವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಿದ್ದು ಕಂಡುಬಂದರೆ ಅಂಥವರನ್ನು ಕರೆತಂದು ಈ ಸೆಲ್ನಲ್ಲಿ 24 ಗಂಟೆಗಳ ಕಾಲ ಇರಿಸಿಕೊಳ್ಳಲಾಗುತ್ತದೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ 2015ರ ಚುನಾವಣೆ ಸಂದರ್ಭದಲ್ಲಿ ಮಹಿಳೆಯರ ಒಂದು ಗುಂಪಿಗೆ ನೀಡಿದ ಭರವಸೆಯಂತೆ 2016ರ ಏಪ್ರಿಲ್ನಿಂದ ರಾಜ್ಯದಲ್ಲಿ ಮದ್ಯಕ್ಕೆ ನಿರ್ಬಂಧ ಹೇರಿದ್ದಾರೆ.
ಇನ್ನು ಇಲ್ಲಿ ಸಂಬಂಧಿತ ಕಾನೂನಿಗೆ ತಿದ್ದುಪಡಿ ತರಲಾಗಿದ್ದು, ಮದ್ಯ ಸೇವನೆ ಮಾಡಿ ಮೊದಲ ಸಲ ಸಿಕ್ಕಿಬಿದ್ದವರನ್ನು ಅವರು ದಂಡ ತೆತ್ತ ಬಳಿಕ ಬಿಡುಗಡೆ ಮಾಡಲಾಗುತ್ತದೆ. ಬಿಹಾರ್ ಪ್ರೊಹಿಬಿಷನ್ ಆ್ಯಂಡ್ ಎಕ್ಸೈಸ್ ಅಮೆಂಡ್ಮೆಂಟ್ ಆ್ಯಕ್ಟ್ 2022ರ ಪ್ರಕಾರ ಮದ್ಯ ಸೇವಿಸಿ ಮೊದಲ ಸಲ ಸಿಕ್ಕಿಬಿದ್ದವರಿಗೆ 2ರಿಂದ 5 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಒಂದು ವೇಳೆ ದಂಡ ನೀಡಲು ವಿಫಲರಾದರೆ 1 ತಿಂಗಳ ಕಾಲ ಸೆರೆಯಲ್ಲಿ ಇಡಲಾಗುತ್ತದೆ. 2018ರಲ್ಲಿ ರೂಪಿಸಲಾದ ಈ ಕಾಯ್ದೆ ಪ್ರಕಾರ ಈ ಹಿಂದೆ ಮದ್ಯ ಸೇವಿಸಿ ಮೊದಲ ಸಲ ಸಿಕ್ಕಿಬಿದ್ದವರಿಗೆ 50 ಸಾವಿರ ರೂ. ದಂಡ ವಿಧಿಸಲಾಗುತ್ತಿತ್ತು.