ಹರಿಪ್ರಸಾದ್ ನಂದಳಿಕೆ ಕಾರ್ಕಳ
ಶಾಲಾ ವಿದ್ಯಾರ್ಥಿಗಳು, ದಿನನಿತ್ಯ ಕೆಲಸಕ್ಕೆ ತೆರಳುವವರು ಮತ್ತಿತರ ಕಾರ್ಯಗಳಿಗೆ ಬಸ್‌ನಲ್ಲಿ ಪ್ರಯಾಣಿಸುವವರ ಸಂಖ್ಯೆ ಸಾಕಷ್ಟಿದ್ದರೂ, ಬೆಳಗ್ಗೆ ಹಾಗೂ ಸಂಜೆ ಸಾಕಷ್ಟು ಬಸ್ ವ್ಯವಸ್ಥೆಯಿಲ್ಲದೆ ಪ್ರಯಾಣಿಕರು ಅಪಾಯಕಾರಿ ಸ್ಥಿತಿಯಲ್ಲಿ ಸಂಚರಿಸಬೇಕಾದ ಅನಿವಾರ್ಯ ಸ್ಥಿತಿ ಪಡುಬಿದ್ರಿ-ಕಾರ್ಕಳ ನಡುವಣ ರಾಜ್ಯ ಹೆದ್ದಾರಿಯಲ್ಲಿದೆ.
ಶಿಕ್ಷಣಕ್ಕೆ ಹೆಸರುವಾಸಿಯಾದ ನಿಟ್ಟೆ ಮತ್ತು ಕಾರ್ಕಳ ತಾಲೂಕಿನ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುತ್ತಿರುವ ಬಹುತೇಕ ವಿದ್ಯಾರ್ಥಿಗಳು ಮಂಗಳೂರಿನಿಂದ ಪಡುಬಿದ್ರಿ ಮಾರ್ಗವಾಗಿ ಬೆಳ್ಮಣ್ ಮೂಲಕ ಬಸ್‌ನಲ್ಲಿ ನಿತ್ಯ ಪ್ರಯಾಣಿಸುತ್ತಾರೆ. ಹೀಗಾಗಿ ಪ್ರತಿನಿತ್ಯವೂ ಬೆಳಗ್ಗೆ ಈ ಭಾಗದಲ್ಲಿ ಓಡಾಡುವ ಬಸ್‌ಗಳು ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿದ್ದು, ಬಸ್ಸಿನ ಬಾಗಿಲಲ್ಲೇ ನೇತಾಡಿಕೊಂಡು ಸಾಗುವಂತಾಗಿದೆ.
ಮಂಗಳೂರು, ಪಡುಬಿದ್ರಿ, ಉಡುಪಿ, ಬೆಳ್ಮಣ್ ಭಾಗದಿಂದ ಬೆಳಗ್ಗೆ 7 ಗಂಟೆಯಿಂದ 9ರವರೆಗೆ ಸಾಗುವ ಬಸ್‌ಗಳು ಕೆಲಸಗಳಿಗೆ ತೆರಳುವ ಮಂದಿ ಹಾಗೂ ಶಾಲೆ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಂದ ತುಂಬಿರುವ ಕಾರಣ, ನಿಲ್ದಾಣದಲ್ಲಿ ಬಸ್ ನಿಲ್ಲದೆ ನೇರವಾಗಿ ಸಾಗುತ್ತವೆ. ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತೆರಳಲು ಬಸ್ ಸಿಗದೆ ನಿತ್ಯ ಪರದಾಡುವಂತಾಗಿದೆ.
ಸರಿಯಾದ ವೇಳೆಗೆ ಶಾಲೆ-ಕಾಲೇಜಿಗೆ ತೆರಳಬೇಕಾಗಿದ್ದ ವಿದ್ಯಾರ್ಥಿಗಳು ಜೀವದ ಹಂಗು ತೊರೆದು ಬಸ್ ಬಾಗಿಲಲ್ಲೇ ನಿಂತು ರಾಡ್ ಹಿಡಿದು ಸಾಗುವ ಅನಿವಾರ್ಯ ಸ್ಥಿತಿಯಿದೆ. ಬಸ್ ಜನನಿಬಿಡವಾಗಿದೆ ಎಂಬ ಕಾರಣಕ್ಕೆ ಹತ್ತದಿದ್ದರೆ, ಮತ್ತೆ ಬರುವ ಬಸ್‌ನಲ್ಲಿಯೂ ಅದೇ ಸ್ಥಿತಿ. ಹೀಗಾಗಿ ನೇತಾಡಿಕೊಂಡು ಹೋಗುವುದು ಇಲ್ಲಿ ಅನಿವಾರ್ಯ. ಹೆಣ್ಣು ಮಕ್ಕಳು ಕೂಡ ಬಾಗಿಲಲ್ಲೇ ನಿಂತು ಪ್ರಯಾಣಿಸುತ್ತಿರುವುದು ಇಲ್ಲಿ ಮಾಮೂಲು.
ಪಡುಬಿದ್ರಿಯಿಂದ ಕಾರ್ಕಳ ಸಾಗುವ ಹೆದ್ದಾರಿ ಅತ್ಯಂತ ತಿರುವಿನಿಂದ ಕೂಡಿದೆ. ಕಡಿದಾದ ತಿರುವಿನಲ್ಲಿ ಸಂಚರಿಸುವ ಬಹುತೇಕ ಬಸ್ಸುಗಳು ವಾಲಿಕೊಂಡೇ ಹೋಗುತ್ತಿರುವುದು ಅಪಾಯಕಾರಿ. ಯಾವುದೇ ಸಂದರ್ಭದಲ್ಲಿ ಅನಾಹುತ ಸಾಧ್ಯತೆಗಳಿದ್ದರೂ ಪ್ರಾಣವನ್ನು ಲೆಕ್ಕಿಸದೆ ಬಸ್‌ನಲ್ಲಿ ಪ್ರಯಾಣಿಕರು ಓಡಾಡಬೇಕಾಗಿದೆ. ಈ ರಸ್ತೆಯಲ್ಲಿ ಸರ್ಕಾರಿ ಬಸ್‌ಗಳ ಓಡಾಟ ತೀರಾ ಕಡಿಮೆಯಿದ್ದು, ವಿದ್ಯಾರ್ಥಿಗಳ ಸಮಸ್ಯೆ ಗಮನಿಸಿ, ಸರ್ಕಾರ ಹಾಗೂ ಸಾರಿಗೆ ಇಲಾಖೆ ಎಚ್ಚೆತ್ತು ಪಡುಬಿದ್ರಿಯಿಂದ ಕಾರ್ಕಳವರೆಗೆ ಸರ್ಕಾರಿ ಬಸ್ ಒದಗಿಸಬೇಕು ಎಂಬುದು ಸ್ಥಳೀಯರ ಆಗ್ರಹ.
ನಿತ್ಯ ಬೆಳಗ್ಗೆ ಬೇಗ ಬಂದು ಕಾದರೂ ಸರಿಯಾದ ವೇಳೆಗೆ ಬಸ್ ಸಿಗುತ್ತಿಲ್ಲ. ಬರುವ ಬಸ್‌ಗಳೆಲ್ಲ ತುಂಬಿರುವ ಪರಿಣಾಮ ನೇತಾಡಿಕೊಂಡೇ ಹೋಗಬೇಕಾದ ಅನಿವಾರ್ಯವಿದೆ.-ಶ್ರಾವ್ಯಾ, ವಿದ್ಯಾರ್ಥಿನಿ
ಈ ಭಾಗದಲ್ಲಿ ಓಡಾಡುವ ಬಸ್‌ಗಳು ತುಂಬಿರುವ ಕಾರಣ, ಕ್ಲಪ್ತ ಸಮಯಕ್ಕೆ ತರಗತಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಕೆಲವೊಮ್ಮೆ ಕಾಲೇಜುಗಳಿಗೆ ಗೈರಾಗಬೇಕಾಗುತ್ತದೆ. ಈ ಭಾಗದಲ್ಲಿ ಒಂದೆರಡು ಸರ್ಕಾರಿ ಬಸ್‌ಗಳನ್ನು ಒದಗಿಸಿದರೆ ನಮ್ಮಂಥ ವಿದ್ಯಾರ್ಥಿಗಳಿಗೆ ಅನುಕೂಲ.-ಪ್ರತೀಕ್ಷಾ, ವಿದ್ಯಾರ್ಥಿನಿ
ಬೆಳ್ಮಣ್ ಭಾಗದಲ್ಲಿ ನಿತ್ಯ ಬಸ್ ಹತ್ತಲು ವಿದ್ಯಾರ್ಥಿಗಳು ಹರಸಾಹಸ ಪಡುತ್ತಿರುವುದನ್ನು ಕಂಡರೆ ಬೇಸರವಾಗುತ್ತದೆ. ಇಲ್ಲಿನ ಸಮಸ್ಯೆಗಳನ್ನು ಜನಪ್ರತಿನಿಧಿಗಳು ಸರ್ಕಾರದ ಗಮನಕ್ಕೆ ತರಬೇಕು. ಒಂದೆರಡು ಬಸ್‌ಗಳನ್ನು ಈ ಭಾಗದಲ್ಲಿ ಹಾಕುವ ಮೂಲಕ ಸರ್ಕಾರ ಸಮಸ್ಯೆಗೆ ಪರಿಹಾರ ಒದಗಿಸಬೇಕು.-ವೀಣೇಶ್ ಕುಮಾರ್, ನಾಗರಿಕರು