ವಿಜಯವಾಣಿ ಸುದ್ದಿಜಾಲ ಗುರುಪುರ
ಪೊಳಲಿ ಸೇತುವೆಯಲ್ಲಿ ಘನ ವಾಹನ ನಿಷೇಧಿಸಿದ ಬಳಿಕ ಪೊಳಲಿ, ಅಡ್ಡೂರು, ಬಡಗಬೆಳ್ಳೂರು, ತೆಂಕಬೆಳ್ಳೂರು, ಅಮ್ಮುಂಜೆ, ಕರಿಯಂಗಳ ಗ್ರಾಮಗಳ ಶಾಲಾ- ಕಾಲೇಜು ವಿದ್ಯಾರ್ಥಿಗಳು, ಕಾರ್ಮಿಕರು, ವಯೋವೃದ್ಧರು, ಭಕ್ತರ ಸಹಿತ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಿರುವ ಹಿನ್ನೆಲೆಯಲ್ಲಿ ಸೋಮವಾರ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಸಭಾಗೃಹದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಮಾಲೋಚನಾ ಸಭೆಯಲ್ಲಿ ಫಲ್ಗುಣಿ ಸೇತುವೆ ಹೋರಾಟ ಸಮಿತಿ(ಅಡ್ಡೂರು-ಪೊಳಲಿ) ರಚಿಸಲಾಯಿತು.
ಪೊಳಲಿ- ಅಡ್ಡೂರು ಹಳೇ ಸೇತುವೆಗೆ ಸೋಮವಾರ ಆಗಮಿಸಿರುವ ಸೇತುವೆ ತಪಾಸಣಾ ವಾಹನದ ಮೂಲಕ ಸೇತುವೆಯ ಧಾರಣಾ ಸಾಮರ್ಥ್ಯ ಪರೀಕ್ಷೆ ಆರಂಭಗೊಂಡಿದ್ದರೂ ಮುಂಬರುವ ವರದಿ ಬಗ್ಗೆ ಚಿಂತಿಸಬೇಕಿದೆ. ಶಾಲಾ ಬಸ್ ಮತ್ತು ಪ್ರಯಾಣಿಕರ ಬಸ್ ಓಡಾಟಕ್ಕೆ ಅವಕಾಶ ಸಿಕ್ಕಿದರೂ ಇಲ್ಲೊಂದು ಹೊಸ ಸೇತುವೆ ನಿರ್ಮಿಸುವವರೆಗೆ ಹೋರಾಟ ಮುಂದುವರಿಸುವ ಅಗತ್ಯವಿದೆ ಎಂದು ಕರಿಯಂಗಳ ಗ್ರಾಪಂ ಸದಸ್ಯ ಚಂದ್ರಹಾಸ ಪಲ್ಲಿಪಾಡಿ ಹೇಳಿದರು.
ಫಲ್ಗುಣಿ ಸೇತುವೆ ಹೋರಾಟ ಸಮಿತಿ ರಚಿಸಿದ ಸಮಾನ ಮನಸ್ಕರ ಕೂಟವು ವೆಂಕಟೇಶ ನಾವಡ ಅವರನ್ನು ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತು. ಪದಾಧಿಕಾರಿಗಳಾಗಿ ಚಂದ್ರಹಾಸ ಪಲ್ಲಿಪಾಡಿ, ಜಯರಾಮಕೃಷ್ಣ ಪೊಳಲಿ, ಅಬೂಬಕ್ಕರ್, ಶಶಿಕಿರಣ್, ಚಂದ್ರಶೇಖರ ಭಂಡಾರಿ, ಕಮಲಾಕ್ಷ ಪೂಜಾರಿ, ಕಿಶೋರ್ ಪಲ್ಲಿಪಾಡಿ, ಚಂದ್ರಶೇಖರ ಶೆಟ್ಟಿ, ನೂಯಿ ಬಾಲಕೃಷ್ಣ ರಾವ್, ವೀಣಾ ಆಚಾರ್ಯ, ಮಮತಾ ಕರಿಯಂಗಳ, ಚಂದ್ರಾವತಿ ಪೊಳಲಿ ಆಯ್ಕೆಯಾದರು. ನಾಲ್ಕು ಗ್ರಾಮಗಳಿಂದ ತಲಾ 5 ಸದಸ್ಯರನ್ನು ಆಯ್ಕೆ ಮಾಡಲಾಯಿತು.
ವೆಂಕಟೇಶ್ ನಾವಡ, ನೂಯಿ ಬಾಲಕೃಷ್ಣ ರಾವ್, ಕರಿಯಂಗಳ ಗ್ರಾ.ಪಂ ಅಧ್ಯಕ್ಷೆ ರಾಧಾ ಎಲ್., ಉಪಾಧ್ಯಕ್ಷ ರಾಜು ಕೋಟ್ಯಾನ್, ಬಡಗಬೆಳ್ಳೂರು ಗ್ರಾ.ಪಂ ಅಧ್ಯಕ್ಷೆ ರೂಪಾ, ಅಮ್ಮುಂಜೆ ಗ್ರಾಪಂ ಉಪಾಧ್ಯಕ್ಷ ರಾಧಾಕೃಷ್ಣ ತಂತ್ರಿ, ಬಸ್ ಮಾಲೀಕ ಶಿವಪ್ರಸಾದ್, ವಕೀಲ ಚಂದ್ರಶೇಖರ ರಾವ್, ಜಯರಾಮಕೃಷ್ಣ ಪೊಳಲಿ, ಚಂದ್ರಶೇಖರ ಭಂಡಾರಿ, ಅಬೂಬಕ್ಕರ್ ಅಮ್ಮುಂಜೆ, ಚಂದ್ರಶೇಖರ ಶೆಟ್ಟಿ, ಉಮೇಶ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು. ಚಂದ್ರಹಾಸ ಪಲ್ಲಿಪಾಡಿ ಪ್ರಸ್ತಾವನೆಗೈದರು. ಸುಬ್ರಾಯ ಕಾರಂತ ನಿರೂಪಿಸಿದರು.