ಗುರುಪುರ: ಮಂಗಳೂರು ವಿಶೇಷ ಆರ್ಥಿಕ ವಲಯದ ಕಂಪನಿಯೊಂದರ ಕಲುಷಿತ ನೀರಿನ ಪೈಪ್ ಒಡೆದು , ಅದರಿಂದ ಹೊರಬರುತ್ತಿರುವ ವಿಷಕಾರಿ ರಾಸಾಯನಿಕ ಮಿಶ್ರಿತ ನೀರು ಬಜ್ಪೆ ಕೊಂಚಾರು ಸೇತುವೆಯ ಮೂಲಕ ಮಳವೂರು ನದಿಗೆ ಹರಿದು, ಹತ್ತಿರದಲ್ಲಿರುವ ಕುಡಿಯುವ ನೀರಿನ ಕಿಂಡಿ ಅಣೆಕಟ್ಟು ಸೇರುವ ಸಾಧ್ಯತೆ ಇದೆ ಎಂದು ಬಜ್ಪೆ ನಾಗರಿಕ ಹಿತರಕ್ಷಣಾ ವೇದಿಕೆ ಆರೋಪಿಸಿದೆ.
ಹೆಚ್ಚಿನ ಪ್ರವಾಣದಲ್ಲಿ ರಾಸಾಯನಿಕ ಮಿಶ್ರಿತ ನೀರು ನದಿಗೆ ಸೇರಿದರೆ ನದಿ ನೀರು ಕಲುಷಿತಗೊಳ್ಳಲಿದೆ. ಮೀನುಗಳ ಸಹಿತ ಜಲಚರ ಜೀವಿಗಳಿಗೆ ಅಪಾಯ ಎದುರಾಗಲಿದೆ. ಖಾಸಗಿ ಕಂಪನಿಯ ಕಲುಷಿತ ನೀರು ಹರಿಯುವ ಕೊಳವೆ ಒಡೆದು ರಾಸಾಯನಿಕ ಮಿಶ್ರಿತ ನೀರು ಕೊಂಚಾರು ಸೇತುವೆಯ ತೋಡಿನ ಮೂಲಕ ನದಿಗೆ ಹರಿಯುತ್ತಿದೆ. ಕಲುಷಿತ ನೀರಿನ ಮೂಲ ಪತ್ತೆ ಹಚ್ಚಿ, ಸಾರ್ವಜನಿಕರ ಆತಂಕ ದೂರಗೊಳಿಸಬೇಕು ಎಂದು ಬಜ್ಪೆ ಪಟ್ಟಣ ಪಂಚಾಯಿತಿಯನ್ನು ವೇದಿಕೆ ಆಗ್ರಹಿಸಿದೆ.
ಸ್ಥಳೀಯ ಗ್ರಾಮವಾಸಿಗಳ ಜೀವನದ ಜತೆ ಚೆಲ್ಲಾಟವಾಡುವ ಕಂಪನಿಗಳ ವಿರುದ್ಧ ಶ್ರೀ ಸೂಕ್ತ ಕ್ರಮ ಕೈಗೊಳ್ಳದೆ ಹೋದಲ್ಲಿ ಎಂಎಸ್‌ಇಜಡ್ ಗೇಟ್ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ವೇದಿಕೆ ಸಂಚಾಲಕ ಸಿರಾಜ್ ಬಜ್ಪೆ ಎಚ್ಚರಿಸಿದ್ದಾರೆ.