

ಮಂಗಳೂರು: ಬಂಟ್ವಾಳ ತಾಲೂಕು 23ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಮುಳಿಯ ಶಂಕರ ಭಟ್ ಅವರನ್ನು ಆಯ್ಕೆ ಮಾಡಲಾಗಿದೆ.
ನಿವೃತ್ತ ಶಿಕ್ಷಕರಾಗಿರುವ ಮುಳಿಯ ಶಂಕರ ಭಟ್ ಅವರು ಮಕ್ಕಳ ಸಾಹಿತ್ಯದಿಂದ ತೊಡಗಿ ಆಧ್ಯಾತ್ಮ, ಧಾರ್ಮಿಕ ಸಹಿತ ವೈವಿಧ್ಯಮಯ ಸಾಹಿತ್ಯ ರಚನೆಗಳನ್ನು ಮಾಡಿದ್ದು, ಸುಮಾರು 19ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಪತ್ರಕರ್ತರಾಗಿ, ಗಮಕಿಯಾಗಿಯೂ ತೊಡಗಿಸಿಕೊಂಡಿರುವ ಅವರ ಕೃತಿ ಕೇರಳ ಶಾಲಾ ಪಠ್ಯದಲ್ಲಿ ಸೇರ್ಪಡೆಯಾಗಿದೆ. 2002ರಲ್ಲಿ ಪುತ್ತೂರಿನಲ್ಲಿ ನಡೆದ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದ ಅವರು, ಒಡಿಯೂರಿನಲ್ಲಿ 2006ರಲ್ಲಿ ನಡೆದ ವಿಟ್ಲ ಹೋಬಳಿ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದರು.
2021ರಲ್ಲಿ ಮಂಚಿಯಲ್ಲಿ ನಡೆದ ತಾಲೂಕು ಗಮಕ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಅವರಿಗೆ ಆಳ್ವಾಸ್ ನುಡಿಸಿರಿ ಸಹಿತ ಹಲವೆಡೆ ಸನ್ಮಾನಗಳು ಸಂದಿವೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಪಿ.ಶ್ರೀನಾಥ್ ತಿಳಿಸಿದ್ದಾರೆ.