ಜಿಲ್ಲೆ

ಕಳವಾದ ನಾಯಿಯನ್ನು ಹನ್ನೆರಡೇ ಗಂಟೆಗಳಲ್ಲಿ ಹುಡುಕಿಕೊಟ್ಟ ಪೊಲೀಸರು; ಹುಡುಕಿಕೊಡದಿದ್ದರೆ ಎಸ್​ಪಿಗೆ ತಿಳಿಸುವುದಾಗಿ ಹೇಳಿದ್ದ ದೂರುದಾರರು

ಶಿವಮೊಗ್ಗ: ಸಂಕೀರ್ಣವಾದ ಕಳವು ಅಥವಾ ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ಪೊಲೀಸರು ಶ್ವಾನದಳದ ಮೊರೆ ಹೋಗುವುದು ಸರ್ವೇಸಾಮಾನ್ಯ. ಆದರೆ ಇಲ್ಲೊಂದು ಪ್ರಕರಣದಲ್ಲಿ ಪೊಲೀಸರಿಗೆ ನಾಯಿಯನ್ನೇ ಹುಡುಕಿಕೊಡುವ ಪರಿಸ್ಥಿತಿ ಎದುರಾಗಿತ್ತು.

ಶಿವಮೊಗ್ಗದ ರಾಜೇಂದ್ರನಗರ ನಿವಾಸಿ ಡಾ. ಪರಮೇಶ್ವರ್ ಅವರು ತಮ್ಮ ಮನೆಯಲ್ಲಿದ್ದ ಬೀಗಲ್ ತಳಿಯ ನಾಯಿಮರಿ ಕಳವಾಗಿದೆ ಎಂದು ಶಿವಮೊಗ್ಗದ ಜಯನಗರ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಅಪರಿಚಿತರು ನಾಯಿ ಕದ್ದೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಾಯಿಯನ್ನು ಹುಡುಕಿಕೊಡದಿದ್ದರೆ ಎಸ್​ಪಿಗೆ ದೂರು ನೀಡುವುದಾಗಿಯೂ ವೈದ್ಯರು ಪೊಲೀಸರಿಗೆ ತಿಳಿಸಿದ್ದರು.

ವೈದ್ಯರ ಈ ಹೇಳಿಕೆಯಿಂದ ಚುರುಕಾದ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ. ಸಿಸಿಟಿವಿ ದೃಶ್ಯವನ್ನಾಧರಿಸಿ ಕಾರ್ಯಾಚರಣೆಗೆ ಇಳಿದ ಪೊಲೀಸರು ದೂರು ನೀಡಿದ 12 ಗಂಟೆಯೊಳಗೇ ನಾಯಿಯನ್ನು ಪತ್ತೆ ಮಾಡಿದ್ದಾರೆ. ಮಾತ್ರವಲ್ಲ, ನಾಯಿಮರಿಯನ್ನು ವಾರಸುದಾರರಿಗೆ ಹಸ್ತಾಂತರ ಕೂಡ ಮಾಡಿದ್ದಾರೆ.