ಬೆಂಗಳೂರು: ಎಫ್ಐಆರ್ ದಾಖಲಿಸದೆ ಯುವಕನೊಬ್ಬನನ್ನು ಠಾಣೆಗೆ ಕರೆದೊಯ್ದು ಥಳಿಸಿದ್ದಲ್ಲದೆ, ಮೂತ್ರ ಕುಡಿಸಿದ್ದರೆಂದು ಆರೋಪಿಸಲಾಗಿದ್ದ ನಗರದ ಬ್ಯಾಟರಾಯನಪುರ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಕೆ.ಎನ್.ಹರೀಶ್ರನ್ನು ಅಮಾನತುಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ನೆರೆಮನೆಯವರ ಜತೆಗಿನ ಜಗಳಕ್ಕೆ ಸಂಬಂಧಿಸಿದಂತೆ ಪಾದರಾಯನಪುರ ನಿವಾಸಿ ತೌಸೀಫ್ ಪಾಷಾ ಎಂಬ ಯುವಕನನ್ನು ಡಿಸೆಂಬರ್ 2 ರ ಮಧ್ಯರಾತ್ರಿ 1 ಗಂಟೆಗೆ ಠಾಣೆಗೆ ಕರೆದೊಯ್ದ ಹರೀಶ್, ಚಿತ್ರಹಿಂಸೆ ನೀಡಿದ್ದರು. ಎಫ್ಐಆರ್ ದಾಖಲಿಸದೆ ಮನಸೋಇಚ್ಛೆ ಥಳಿಸಿದ್ದರು. ಕುಡಿಯಲು ನೀರು ಕೇಳಿದರೆ ಬಾಟಲ್ಗೆ ಮೂತ್ರ ತುಂಬಿ ಕೊಟ್ಟಿದ್ದರು. ಆತನ ಗಡ್ಡ ಬೋಳಿಸಿ ಅಮಾನವೀಯವಾಗಿ ವರ್ತಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು.
ಇದನ್ನೂ ಓದಿ: ಶಾಲಾ ವಿದ್ಯಾರ್ಥಿನಿಯರ ಮೇಲೆ ಪ್ರಾಂಶುಪಾಲ-ಶಿಕ್ಷಕರಿಂದ ಗ್ಯಾಂಗ್ರೇಪ್; ಶಿಕ್ಷಕಿಯರು ವಿಡಿಯೋ ಮಾಡುತ್ತಿದ್ದರು!
ಈ ಬಗ್ಗೆ ತೌಸೀಫ್ ಹೇಳಿಕೆಯುಳ್ಳ ವಿಡಿಯೋ ಕೂಡ ಒಂದು ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಬ್ಯಾಟರಾಯನಪುರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಕುರಿತು ಡಿಸಿಪಿ ಸಂಜಯ್ ಪಾಟೀಲ್ ಸೂಚನೆ ಮೇರೆಗೆ ಇಲಾಖಾ ಮಟ್ಟದಲ್ಲಿ ತನಿಖೆ ನಡೆಸಿದ್ದು, ಕರ್ತವ್ಯ ಲೋಪಕ್ಕಾಗಿ ಸಬ್ ಇನ್ಸ್‌ಪೆಕ್ಟರ್ ಹರೀಶ್ರನ್ನು ಸಸ್ಪೆಂಡ್ ಮಾಡಲಾಗಿದೆ ಎನ್ನಲಾಗಿದೆ.