ಜಿಲ್ಲೆ

ಜಿ. ಪರಮೇಶ್ವರ್​ ಮೇಲೆ ಕಲ್ಲೆಸೆತ ಪ್ರಕರಣ: 2 ಆಯಾಮದಲ್ಲಿ ತನಿಖೆ ಶುರು ಮಾಡಿದ ಪೊಲೀಸರು

ತುಮಕೂರು: ಮಾಜಿ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್​ ಮೇಲೆ ಕೊರಟಗೆರೆ ಕ್ಷೇತ್ರದಲ್ಲಿ ಕಲ್ಲು ತೂರಾಟ ನಡೆದ ಪ್ರಕರಣ ಇದೀಗ ಸಾಕಷ್ಟು ಅನುಮಾಗಳಿಗೆ ಎಡೆಮಾಡಿಕೊಟ್ಟಿದೆ. ಹೀಗಾಗಿ ಪೊಲೀಸರು ಎರಡು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ವಿರೋಧಿಗಳಿಗೆ ಮಾಜಿ ಡಿಸಿಎಂ ಟಾರ್ಗೆಟ್ ಆದ್ರಾ? ಅನ್ನೋ ಪ್ರಶ್ನೆ ಉದ್ಭವವಾಗಿದೆ. ಪರಂ ಅವರಿಗೆ ಒಂದಲ್ಲ ಎರಡು ಬಾರಿ ಕಲ್ಲು ಎಸೆತವಾಗಿದೆ. ಮೊದಲ ಬಾರಿ ನಡೆದ ದಾಳಿಯಲ್ಲಿ ಅದೃಷ್ಟವಶಾತ್ ಪರಂ ಪಾರಾಗಿದ್ದರು. ಎರಡನೇ ಬಾರಿ ನಡೆದ ದಾಳಿಯಲ್ಲಿ‌‌ ಪರಂಗೆ ಕಲ್ಲೇಟು ಬಿದ್ದಿದೆ. ಪರಂ ಅವರು ಗೆಲ್ಲುವುದು ಖಚಿತ, ಹೀಗಾಗಿ ಕಲ್ಲು ಎಸೆತದಲ್ಲಿ ವಿರೋಧಿಗಳ ಕೈವಾಡ ಇದೆ ಎಂದು ಪರಂ ಆಪ್ತರು ಆರೋಪ ಮಾಡಿದ್ದಾರೆ.

ಕೂಡಲೇ ಬಂಧಿಸಿ

ಇಷ್ಟೇ ಅಲ್ಲದೆ, ಪರಂ ಆಪ್ತರು ಪೊಲೀಸ್ ಇಲಾಖೆ ಮೇಲೆ‌ ಗೂಬೆ ಕೂರಿಸಿದ್ದಾರೆ. ಒಬ್ಬ ಮಾಜಿ ಡಿಸಿಎಂಗೆ ಭದ್ರತೆಯಿಲ್ಲ ಅಂದರೆ, ನಮ್ಮಂತಗ ಸಾಮಾನ್ಯರ ಗತಿ ಏನು ಎಂದು ಪ್ರಶ್ನೆ ಮಾಡಿದ್ದಾರೆ. ಆರೋಪಿಗಳನ್ನು ಕೂಡಲೇ ಬಂಧಿಸಿ, ಇಲ್ಲದಿದ್ದರೆ, ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಎರಡು ಆಯಾಮದಲ್ಲಿ ತನಿಖೆ

ಪರಂಗೆ ತಗುಲಿದ ಕಲ್ಲಿನ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಹೂ ಚೆಲ್ಲಲು ತಂದಿದ್ದ ಜೆಸಿಬಿಯಲ್ಲೇ ಬಂತಾ ಕಲ್ಲು? ಇಲ್ಲ ವಿರೋಧಿಗಳು ಏನಾದ್ರು ಹೂ ಹಾಕುವುದನ್ನೇ ಕಾದು ಪರಂ ಕಡೆಗೆ ಕಲ್ಲು ಬಿಸಿದ್ರಾ? ಎಂಬ ಎರಡು ಆಯಾಮದಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ತ್ರಿಕೋನ ಸ್ಪರ್ಧೆ

ಈ ಬಾರಿ ಕೊರಟಗೆರೆ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಡುವೆ ತೀವ್ರ ಪೈಪೋಟಿ ಇದೆ. ಬಿಜೆಪಿ ಹಾಗೂ ಜೆಡಿಎಸ್​ನವರೇ ಈ ಕೃತ್ಯ ಎಸಗಿದ್ದಾರೆಂದು ಪರಂ‌ ಬೆಂಬಲಿಗರು ಆರೋಪ ಮಾಡಿದ್ದಾರೆ. ಪರಂಗೆ ತಗುಲಿದ ಕಲ್ಲನ್ನೇ ಹುಡುಕಿ ತಂದು ಪೊಲೀಸರಿಗೆ ನೀಡಿದ್ದಾರೆ.

ರಾಜಕೀಯದಾಟ ನಡೆಯುತ್ತಿದೆಯಾ?

ಇನ್ನು ಚುನಾವಣಾ ಹೊತ್ತಲ್ಲಿ ಕೊರಟಗೆರೆ ಕ್ಷೇತ್ರದಲ್ಲಿ ರಾಜಕೀಯದಾಟ ನಡೆಯುತ್ತಿದೆಯಾ ಎಂಬ ಅನುಮಾನವೂ ಇದೆ. ಮತದಾರರನ್ನ ತಮ್ಮತ್ತ ಸೆಳೆಯಲು ಈ ರೀತಿಯಾಗಿ ಕಾಂಗ್ರೆಸ್​ನವರೇ ಮಾಡಿದ್ದಾರೆ ಎಂಬ ಗುಮಾನಿ ಕ್ಷೇತ್ರದಲ್ಲಿ ಹರಿದಾಡುತ್ತಿದೆ. ಆದರೆ, ಪೊಲೀಸ್ ತನಿಖೆಯಿಂದಷ್ಟೇ ಸತ್ಯಾಸತ್ಯಾತೆ ಹೊರಬರಬೇಕಿದೆ. (ದಿಗ್ವಿಜಯ ನ್ಯೂಸ್​)