More

    ದಳಕ್ಕೆ ಕಾಡುತ್ತಿದೆ ಒಳೇಟಿನ ಆತಂಕ: ನುಂಗಲಾರದ ತುತ್ತಾದ ವಿಜಯಾನಂದ ಸ್ಪರ್ಧೆ

    ಮಂಡ್ಯ: ತನ್ನ ಭದ್ರಕೋಟೆ ಎಂದು ಬೀಗುತ್ತಿದ್ದ ಜೆಡಿಎಸ್‌ಗೆ ಮಂಡ್ಯ ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಒಳೇಟಿನ ಆತಂಕ ಕಾಡುತ್ತಿದೆ.
    ಹೊಂದಾಣಿಕೆ ಕೊರತೆ, ಒಳಜಗಳ, ನಾಯಕತ್ವದ ಸಮಸ್ಯೆ, ಮುಖಂಡರ ಬಂಡಾಯ, ವರಿಷ್ಠರ ಅನಗತ್ಯ ಹಸ್ತಕ್ಷೇಪದಿಂದಾಗಿ ಜೆಡಿಎಸ್‌ನೊಳಗೆ ಕುದಿಮೌನ ಆವರಿಸಿದೆ. ಶಾಸಕ ಎಂ.ಶ್ರೀನಿವಾಸ್, ವಿಜಯಾನಂದ ಸೇರಿದಂತೆ ಹಲವರ ಬಂಡಾಯದ ನಂತರ ಮೇಲ್ನೋಟಕ್ಕೆ ಎಲ್ಲವೂ ಸರಿಯಾಗಿದೆ ಎನ್ನುವಂತಿದ್ದರೂ ಒಳಗೊಳಗೆ ಅತೃಪ್ತಿ ಮಾತ್ರ ಕಡಿಮೆಯಾದಂತೆ ಕಾಣುತ್ತಿಲ್ಲ.
    ಎಂಎಲ್‌ಸಿ ಮರಿತಿಬ್ಬೇಗೌಡ, ಹಿರಿಯ ನಾಯಕ ಬಿ.ಎಲ್.ದೇವರಾಜು ಸೇರಿದಂತೆ ಹಲವು ಹಿರಿಯ ಮುಖಂಡರು ಪಕ್ಷ ತೊರೆದು ಕಾಂಗ್ರೆಸ್ ಸೇರಿದರೂ ದಳಪತಿಗಳು ಕ್ಯಾರೆ ಎನ್ನಲಿಲ್ಲ. ಇದರೊಟ್ಟಿಗೆ ನಿತ್ಯಸಚಿವ ಕೆ.ವಿ.ಶಂಕರಗೌಡ ಅವರ ಮೊಮ್ಮಗ ಕೆ.ಎಸ್.ವಿಜಯಾನಂದ ಹಾಗೂ ಹಾಲಿ ಶಾಸಕ ಎಂ.ಶ್ರೀನಿವಾಸ್ ಕೂಡ ಪಕ್ಷದಿಂದ ಹೊರಬಂದಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.
    ವಿಜಯಾನಂದಗೆ ಟಿಕೆಟ್ ಕೊಡುವುದು ಪಕ್ಕಾ ಎನ್ನುವ ನಿರೀಕ್ಷೆ ಹುಸಿಯಾಗುತ್ತಿದ್ದಂತೆ ಕೆ.ವಿ.ಶಂಕರಗೌಡ ಕುಟುಂಬದ ಹಿತೈಷಿಗಳು, ಬೆಂಬಲಿಗರು ದಳವನ್ನು ದೂರ ತಳ್ಳಿದರು. ಅತ್ತ ರಾಮಚಂದ್ರು ವಿರುದ್ಧ ಬಹಿರಂಗವಾಗಿಯೇ ಆಕ್ರೋಶ ಹೊರಹಾಕುತ್ತಿದ್ದ ಎಂ.ಶ್ರೀನಿವಾಸ್ ಹಾಗೂ ಜಿಪಂ ಮಾಜಿ ಸದಸ್ಯ ಎಚ್.ಎನ್.ಯೋಗೇಶ್, ಮಹಾಲಿಂಗೇಗೌಡ ಮುದ್ದನಘಟ್ಟ ದಳಪತಿಗಳ ನಿರ್ಧಾರದಿಂದ ರೋಸಿ ಹೋದರು. ಇದೀಗ ನಾಲ್ವರು ಸೇರಿ ಸ್ವಾಭಿಮಾನದ ಹೆಸರಿನಲ್ಲಿ ಚುನಾವಣೆ ಮಾಡುತ್ತಿದ್ದಾರೆ. ಇದು ಜೆಡಿಎಸ್‌ಗೆ ಒಳೇಟಿನ ಭೀತಿ ಕಾಡಲಾರಂಭಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts