ಬೆಂಗಳೂರು: ಸಾಮಾನ್ಯವಾಗಿ ಕಳ್ಳರು ಪೊಲೀಸರನ್ನು ಕಂಡರೆ ಓಡಿಹೋಗುತ್ತಾರೆ ಇಲ್ಲವೇ ತಲೆಮರೆಸಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಖತರ್ನಾಕ್ ಕಳ್ಳ ಪೊಲೀಸ್ ಇನ್ಸ್ಟೆಕ್ಟರ್ವೊಬ್ಬರ ಸೊಂಟಕ್ಕೇ ಕೈ ಹಾಕಿ ವಾಕಿಟಾಕಿಯನ್ನು ಕದ್ದಿದ್ದಾನೆ. ವಾಕಿಟಾಕಿ ಎಲ್ಲೂ ಪತ್ತೆಯಾಗದ್ದರಿಂದ ಆ ಇನ್ಸ್ಪೆಕ್ಟರ್ ಪೊಲೀಸರಿಗೆ ದೂರು ದಾಖಲಿಸಿದ್ದಾರೆ.
ಬೆಂಗಳೂರಿನ ಎಸ್.ಜೆ. ಪಾರ್ಕ್ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಶಿವಕುಮಾರ್ ವಾಕಿಟಾಕಿ ಕಳೆದುಕೊಂಡವರು. ಸೆ. 27ರಂದು ಕೃಷಿ ಕಾಯ್ದೆ ವಿರೋಧಿಸಿ ನಡೆದಿದ್ದ ಭಾರತ್ ಬಂದ್ ವೇಳೆ ಈ ಕಳ್ಳತನ ಮಾಡಲಾಗಿದೆ. ಭಾರತ್ ಬಂದ್ ಹಿನ್ನೆಲೆಯಲ್ಲಿ ಪುರಭವನ ಮುಂಭಾಗ ನಡೆಯುತ್ತಿದ್ದ ಪ್ರತಿಭಟನೆ ಸಂದರ್ಭವನ್ನು ನಿಭಾಯಿಸಲು ಇನ್ಸ್ಪೆಕ್ಟರ್ ನಿಯೋಜನೆಗೊಂಡಿದ್ದರು.
ಇದನ್ನೂ ಓದಿ: ಚಲಿಸುತ್ತಿದ್ದ ಆಟೋರಿಕ್ಷಾದ ಮೇಲೆ ಬಿದ್ದ ಮರ, ಚಾಲಕ ಸ್ಥಳದಲ್ಲೇ ಸಾವು; ಪ್ರಯಾಣಿಕ ಪ್ರಾಣಾಪಾಯದಿಂದ ಪಾರು…
ರೈತ ಸಂಘಟನೆಗಳ ಸದಸ್ಯರು ಪ್ರತಿಭಟನೆ-ಜಾಥಾ ನಡೆಸಿದ ಸಂದರ್ಭದಲ್ಲಿ ಜನಜಂಗುಳಿ ಉಂಟಾಗಿದ್ದು, ರಸ್ತೆ ತಡೆಗೆ ಮುಂದಾಗಿದ್ದ ಗುಂಪನ್ನು ಪೊಲೀಸರು ನಿಯಂತ್ರಿಸಲು ಹೋದಾಗ ಕಳವು ಮಾಡಲಾಗಿದೆ.
ಬೆಲ್ಟ್ಗೆ ಸಿಕ್ಕಿಸಿಕೊಂಡಿದ್ದ ವಾಕಿಟಾಕಿಯನ್ನು ಜನಜಂಗುಳಿಯಲ್ಲಿದ್ದ ಇನ್ಸ್ಪೆಕ್ಟರ್ಗೆ ಗೊತ್ತೇ ಆಗದಂತೆ ಕಳ್ಳ ಎಗರಿಸಿದ್ದ. ಇನ್ಸ್ಪೆಕ್ಟರ್ ಮಾಹಿತಿ ರವಾನೆಗೆಂದು ಸೊಂಟಕ್ಕೆ ಕೈ ಹಾಕಿದಾಗ ವಾಕಿಟಾಕಿ ನಾಪತ್ತೆ ಆಗಿರುವುದು ಅರಿವಿಗೆ ಬಂದಿತ್ತು. ಎಲ್ಲ ಕಡೆ ಹುಡುಕಾಡಿದರೂ ವಾಕಿಟಾಕಿ ಪತ್ತೆಯಾಗದ ಕಾರಣ ಅವರು ಎಸ್.ಜೆ.ಪಾರ್ಕ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.