ಜಿಲ್ಲೆ

ಬೇರೆ ಅಭ್ಯರ್ಥಿಗಳ ಹೆಸರಲ್ಲಿ ಪರೀಕ್ಷೆಗೆ ಕುಳಿತ್ತಿದ್ದ ಪೊಲೀಸ್​ ಪೇದೆ ಸೇರಿ ಇಬ್ಬರ ಬಂಧನ

vrlmediadvg

ಬೆಂಗಳೂರು: ಕೆಎಸ್‌ಆರ್‌ಪಿ ಪೇದೆ ಹುದ್ದೆಯ ನೇಮಕಾತಿಯ ಲಿಖಿತ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಬದಲಿಗೆ ಪರೀಕ್ಷೆ ಬರೆಯುತ್ತಿದ್ದ ಕಾನ್‌ಸ್ಟೇಬಲ್ ಸೇರಿ ಇಬ್ಬರನ್ನು ಪಶ್ಚಿಮ ವಿಭಾಗ ಪೊಲೀಸರು ಬಂಧಿಸಿದ್ದಾರೆ.

ಶೃಂಗೇರಿ ಪೊಲೀಸ್ ಠಾಣೆಯ ಪೇದೆ ನಾಗಪ್ಪ ತುಕ್ಕಣ್ಣನವರ್ ಹಾಗೂ ಮಲ್ಲಿಕಾರ್ಜುನ್ ಬಬಲಣ್ಣನವರ್ ಬಂಧಿತರು. ಆರೋಪಿಗಳ ವಿರುದ್ಧ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.

ರಾಜ್ಯಾದ್ಯಂತ ಕೆಎಸ್ಆರ್‌ಪಿ ಹಾಗೂ ಐಆರ್‌ಬಿ ಪೇದೆ ಹುದ್ದೆಗಳಿಗೆ ಭಾನುವಾರ ಪರೀಕ್ಷೆ ನಡೆಸಲಾಗುತ್ತಿತ್ತು. ಪಶ್ಚಿಮ ವಿಭಾಗದಲ್ಲಿ 8 ಪರೀಕ್ಷಾ ಕೇಂದ್ರಗಳಿದ್ದವು. ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಚನ್ನಸಂದ್ರದಲ್ಲಿನ ಜೆಎಸ್‌ಎಸ್ ಕಾಲೇಜಿನಲ್ಲಿ ಹಾಲಪ್ಪ ನಾರಾಯಣ ಹಲ್ಲೂರು ಎಂಬಾತನ ಬದಲಿಗೆ ಶೃಂಗೇರಿ ಠಾಣೆ ಪೇದೆ ನಾಗಪ್ಪ ತುಕ್ಕಣ್ಣನವರ್ ಪರೀಕ್ಷೆ ಬರೆಯುತ್ತಿದ್ದ.

ರಾಜಾಜಿನಗರದ ಎಸ್‌ಜೆಆರ್‌ಸಿ ಮಹಿಳಾ ಕಾಲೇಜಿನಲ್ಲಿ ಹನುಮಂತ ವಗ್ಗಣ್ಣನವರ್ ಎಂಬಾತನ ಬದಲಿಗೆ ಮಲ್ಲಿಕಾರ್ಜುನ್ ಬಬಲಣ್ಣನವರ್ ಎಂಬಾತ ಪರೀಕ್ಷೆ ಬರೆಯುತ್ತಿದ್ದ. ‌ಈ ಕುರಿತು ಮಾಹಿತಿ ಆಧರಿಸಿ ದಾಳಿ ನಡೆಸಿ ಬಂಧಿಸಲಾಗಿದೆ. ಅಕ್ರಮದ ಬಗ್ಗೆ ಪೊಲೀಸ್ ನೇಮಕಾತಿ ವಿಭಾಗಕ್ಕೆ ವರದಿ ಸಲ್ಲಿಸಲಾಗುವುದು ಎಂದು ಡಿಸಿಪಿ ತಿಳಿಸಿದ್ದಾರೆ.