ಗಂಗೊಳ್ಳಿ ಗ್ರಾಮದ ಫ್ಯಾನ್ಸಿ ಅಂಗಡಿಯಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ವಶಪಡಿಸಿಕೊಂಡಿರುವ ವಾಹನ ಹಾಗೂ ವಸ್ತುಗಳು. 
ಜಿಲ್ಲೆ

48 ಗಂಟೆಯೊಳಗೆ ಫ್ಯಾನ್ಸಿ ಕಳ್ಳತನ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಖಾಕಿ ಪಡೆ

ಗಂಗೊಳ್ಳಿ: ಇಲ್ಲಿನ ಗ್ರಾಮದ ಫ್ಯಾನ್ಸಿ ಅಂಗಡಿಯಲ್ಲಿ ನಡೆದ ಕಳ್ಳತನ ಪ್ರಕರಣವನ್ನು 48 ಗಂಟೆಯೊಳಗೆ ಭೇದಿಸುವಲ್ಲಿ ಯಶಸ್ವಿಯಾಗಿರುವ ಗಂಗೊಳ್ಳಿ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

48 ಗಂಟೆಯೊಳಗೆ ಅರೆಸ್ಟ್

ಬಂಧಿತರನ್ನು ಗಂಗೊಳ್ಳಿ ಲೈಟ್‌ಹೌಸ್ ನಿವಾಸಿ ಸುಲೈಮಾನ್ ಯಾನೆ ನದೀಮ್(27), ಗಂಗೊಳ್ಳಿ ಫಿಶ್ ಮಾರ್ಕೇಟ್ ನಿವಾಸಿ ಮಹಮ್ಮದ್ ಅರೀಫ್(18) ಮತ್ತು ಭಟ್ಕಳದ ನಿವಾಸಿ ಮಹಮ್ಮದ್ ರಯ್ಯನ್(18) ಎಂದು ಗುರುತಿಸಲಾಗಿದೆ. ಉಳಿದಿಬ್ಬರು ಅಪ್ರಾಪ್ತ ವಯಸ್ಸಿನವರು. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಮತ್ತು ಬಾಲಕರನ್ನು ಬಾಲ ನ್ಯಾಯ ಮಂಡಳಿ ಮುಂದೆ ಹಾಜರುಪಡಿಸಲಾಗಿದೆ.

ಬಂಧಿತರಿಂದ 52 ಸಾವಿರ ರೂ. ನಗದು, ಕಳವು ಮಾಡಿದ ಮೊಬೈಲ್, ಕೃತ್ಯಕ್ಕೆ ಉಪಯೋಗಿಸಿದ ಆಟೋ ರಿಕ್ಷಾ, ಬೈಕ್ ಹಾಗೂ ಆರೋಪಿಗಳು ಉಪಯೋಗಿಸುತ್ತಿರುವ ಮೂರು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜಿಲ್ಲಾ ಪೊಲೀಸ್ ಅಧೀಕ್ಷಕರ ಶ್ಲಾಘನೆ

ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಹರೀಶ್ ಆರ್., ಉಪನಿರೀಕ್ಷಕ (ತನಿಖೆ) ಬಸವರಾಜ್ ಕನಶೆಟ್ಟಿ ಹಾಗೂ ಸಿಬ್ಬಂದಿಗಳಾದ ಮೋಹನ, ನಾಗರಾಜ, ಚಂದ್ರಶೇಖರ, ಸಂದೀಪ ಕುರಣಿ ಹಾಗೂ ಸತೀಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಕಳ್ಳತನ ನಡೆದ 48 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ. ಅಭಿನಂದಿಸಿದ್ದಾರೆ.

ಏನಿದು ಪ್ರಕರಣ?

ಗಂಗೊಳ್ಳಿಯ ಜಾಮೀಯಾ ಕಾಂಪ್ಲೆಕ್ಸ್‌ನಲ್ಲಿರುವ ಬಟ್ಟೆ ಹಾಗೂ ಫ್ಯಾನ್ಸಿ ಅಂಗಡಿಯಲ್ಲಿ ಮಾ.31ರಂದು ಸಂಜೆ ಕೆಲಸಗಾರರು ಮಸೀದಿಗೆ ಪ್ರಾರ್ಥನೆಗೆ ಹೋದ ಸಮಯ ಯಾರೋ ಕಳ್ಳರು ಅಂಗಡಿಯ ಬಾಗಿಲನ್ನು ತೆರೆದು ಅಂಗಡಿಯ ಒಳ ಪ್ರವೇಶಿಸಿ ಅಂಗಡಿ ಕ್ಯಾಶ್ ಕೌಂಟರ್‌ನಲ್ಲಿಟ್ಟಿದ್ದ 90 ಸಾವಿರ ರೂ. ನಗದು ಹಾಗೂ ಸುಮಾರು 15 ಸಾವಿರ ರೂ. ಮೌಲ್ಯದ ಮೊಬೈಲ್‌ನ್ನು ಕಳವು ಮಾಡಿದ್ದರು.