ನಕಲಿ ಆಶಾ ಕಾರ್ಯಕರ್ತೆ ಗಂಗಮ್ಮ 
ಜಿಲ್ಲೆ

ಸ್ಕ್ಯಾನಿಂಗ್ ಮಾಡಿಸುವುದಾಗಿ ಹೇಳಿ ಮಾಂಗಲ್ಯವನ್ನೇ ಎಗರಿಸಿದ ನಕಲಿ ಆಶಾ ಕಾರ್ಯಕರ್ತೆ!

ಕೊಪ್ಪಳ: ಆಸ್ಪತ್ರೆಯಲ್ಲಿ ಎಲ್ಲರೂ ಅವರವರ ಚಿಂತೆಯಲ್ಲಿರುತ್ತಾರೆ, ಅಲ್ಯಾರು ಕಳ್ಳರು ಇರುತ್ತಾರೆ ಎಂಬ ಅತಿಯಾದ ಆಶಾವಾದವಂತೂ ಒಳ್ಳೆಯದಲ್ಲ ಎಂಬುದಕ್ಕೆ ಈ ಪ್ರಕರಣವೇ ನಿದರ್ಶನ. ಏಕೆಂದರೆ ಇಲ್ಲೊಬ್ಬಳು ಆಶಾ ಕಾರ್ಯಕರ್ತೆ ಎಂದು ಸುಳ್ಳು ಹೇಳಿ ಮಾಂಗಲ್ಯವನ್ನೇ ಎಗರಿಸಿ ಪರಾರಿ ಆಗಿದ್ದಾಳೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ಸರ್ಕಾರಿ ಆಸ್ಪತ್ರೆಯಲ್ಲಿ ಈ ಪ್ರಕರಣ ನಡೆದಿತ್ತು. ರಾಯಚೂರು ಜಿಲ್ಲೆಯ ಹಂಚಿನಾಳ ನಿವಾಸಿ ಗಂಗಮ್ಮ ಎಂಬಾಕೆಯೇ ಆಶಾ ಕಾರ್ಯಕರ್ತೆ ಎಂದು ಸುಳ್ಳು ಹೇಳಿದ್ದ ಮಹಿಳೆ. ಗರ್ಭಿಣಿ ರೇಣುಕಾ ಎಂಬವರು ಮೋಸಕ್ಕೆ ಒಳಗಾದವರು.

ಕೆಲವು ದಿನಗಳ ಹಿಂದೆ ರೇಣುಕಾ ಎಂಬವರು ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ತಾನು ಆಶಾ ಕಾರ್ಯಕರ್ತೆ ಎಂದು ಪರಿಚಯಿಸಿಕೊಂಡಿದ್ದ ಗಂಗಮ್ಮ ಸ್ಕ್ಯಾನಿಂಗ್ ಮಾಡಿಸುವುದಾಗಿ ಕರೆದುಕೊಂಡು ಹೋಗಿ, ಒಂದೂವರೆ ತೊಲೆಯ ಮಾಂಗಲ್ಯ ಸರ ಬಿಚ್ಚಿಸಿದ್ದು, ಬಳಿಕ ಅದರೊಂದಿಗೆ ಪರಾರಿಯಾಗಿದ್ದಳು. ಕೆಲವು ಹೊತ್ತಿನ ಬಳಿಕ ಆಕೆ ಕಾಣದೇ ಇದ್ದಾಗಲೇ ಅವಳು ನಕಲಿ ಆಶಾ ಕಾರ್ಯಕರ್ತೆ ಎಂಬ ವಿಷಯ ಗೊತ್ತಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಗಂಗಾವತಿ ಪೊಲೀಸರು ಸಿಸಿಟಿವಿ ಕ್ಲಿಪ್ಪಿಂಗ್ ಆಧರಿಸಿ ತನಿಖೆ ನಡೆಸಿದ್ದು, ಗಂಗಮ್ಮನನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.