ಹಾವೇರಿ: 'ಕಾಣೆಯಾಗಿದ್ದಾರೆ..' ಎಂದ ತಕ್ಷಣ ಯಾರೋ ಮಕ್ಕಳು, ವಯಸ್ಸಾದವರು ಇಲ್ಲವೇ ಮರೆವಿನ ರೋಗದವರು ಇರಬಹುದು ಎಂಬ ಯೋಚನೆ ಬರುತ್ತದೆ. ಆದರೆ ಇಲ್ಲಿ ಕಾಣೆಯಾಗಿರುವುದು ಸಚಿವರು. ಹೌದು.. 'ಸಚಿವರು ಕಾಣೆಯಾಗಿದ್ದಾರೆ, ಹುಡುಕಿಕೊಟ್ಟವರಿಗೆ ಬಹುಮಾನ' ಎಂದು ರೈತಮುಖಂಡರು ವಿಭಿನ್ನವಾದ ಪ್ರತಿಭಟನೆ ನಡೆಸಿದ್ದಾರೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಈ ಪ್ರತಿಭಟನೆ ನಡೆದಿದೆ. ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಶಿವರಾಮ್ ಹೆಬ್ಬಾರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಈ ಪ್ರತಿಭಟನೆ ನಡೆದಿದೆ. ಇಲ್ಲಿ ತಹಶೀಲ್ದಾರ್ ಕಚೇರಿ ಎದುರು ನಡೆದಿದ್ದ ಪ್ರತಿಭಟನೆಯಲ್ಲಿ 'ಸಚಿವರು ಕಾಣೆಯಾಗಿದ್ದಾರೆ, ಹುಡುಕಿ ಕೊಟ್ಟವರಿಗೆ ಬಹುಮಾನ' ಎಂಬುದಾಗಿ ಪ್ರತಿಭಟನಾಕಾರರು ಘೋಷಣೆ ಕೂಗಿದ್ದಾರೆ.
ಭಾರಿ ಮಳೆಯಿಂದ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ. ಮನೆ, ಬೆಳೆ, ಬದುಕು ಕಳೆದುಕೊಂಡು ಕಂಗಾಲಾಗಿದ್ದರೂ ಜನರ ಕಷ್ಟ ಕೇಳಿಲ್ಲ. ಶಿವರಾಮ್ ಹೆಬ್ಬಾರ್ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೂ ಒಂದೇ ಒಂದು ಬಾರಿ ಜಿಲ್ಲೆಯ ಪರಿಸ್ಥಿತಿ ಅವಲೋಕಿಸಿಲ್ಲ. ಹೀಗಾಗಿ ಕಾಣೆಯಾಗಿರುವ ಜಿಲ್ಲಾ ಉಸ್ತುವಾರಿ ಸಚಿವರನ್ನು ಹುಡುಕಿಕೊಡಿ ಎಂದು ಪ್ರತಿಭಟನೆ ನಡೆಸಿದ್ದಾರೆ.