ಬೆಂಗಳೂರು: ನೌಕರಿಗಾಗಿ ಹುಡುಕಾಟ ನಡೆಸುತ್ತಿದ್ದ ವ್ಯಕ್ತಿಗೆ, ಆನ್‌ಲೈನ್‌ನಲ್ಲಿ ಚಿನ್ನದ ವ್ಯಾಪಾರದ ಆಮಿಷವೊಡ್ಡಿ ಸೈಬರ್ ಕಳ್ಳರು 50 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ. ವರ್ತೂರು ರಸ್ತೆ ಗುಂಜೂರು ಗ್ರಾಮದ ಲಾಲ್ ವಾಸ್ವಾನಿ (49) ವಂಚನೆಗೆ ಒಳಗಾದವರು. ಇವರು ಕೊಟ್ಟ ದೂರಿನ ಮೇರೆಗೆ ಆರೋಪಿಗಳಾದ ನೆಹರು ಸಿಂಗ್, ಜೇಮ್ಸ್, ಕುಮಾರ್, ಉಮೇಶ್, ಆಲಿಸಾ ಮತ್ತು ಇತರರ ವಿರುದ್ಧ ಎಫ್ಐಆರ್ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಜುಲೈನಲ್ಲಿ ಲಾಲ್ ಆನ್‌ಲೈನ್ ಮೂಲಕ ನೌಕರಿ ಹುಡುಕಾಟ ನಡೆಸುತ್ತಿದ್ದರು. ಆಗ ನೆಹರು ಪರಿಚಯವಾಗಿ ಆನ್‌ಲೈನ್‌ನಲ್ಲಿ ಬಂಗಾರದ ವ್ಯಾಪಾರ ನಡೆಸುತ್ತಿದ್ದೇನೆ. ನಿಮಗೆ ಆಸಕ್ತಿ ಇದ್ದರೆ 1 ಸಾವಿರ ರೂ. ಪಾವತಿ ಮಾಡಿ ಕಂಪನಿಯಲ್ಲಿ ನೋಂದಣಿ ಆಗುವಂತೆ ಆಸೆ ಹುಟ್ಟಿಸಿದ್ದ. ಇದನ್ನು ನಂಬಿದ ಲಾಲ್, ಹಣ ಕೊಟ್ಟು ಕಂಪನಿಗೆ ಸೇರಿದ್ದರು. ಇದಾದ ಮೇಲೆ ಮೊದಲು ಎರಡು ತಿಂಗಳು ಲಾಭಾಂಶ ಕೊಟ್ಟಿದ್ದಾರೆ. ನಂತರ 25 ಸಾವಿರ ರೂ. ಪಾವತಿ ಮಾಡಿದರೆ ದುಪ್ಪಟ್ಟು ಕಮಿಷನ್ ಸಿಗಲಿದೆ ಎಂದು ಸೈಬರ್ ಕಳ್ಳರು ಹೇಳಿದ್ದರು.
ಆಸೆಗೆ ಬಿದ್ದ ಲಾಲ್, 25 ಸಾವಿರ ರೂ. ಹೂಡಿಕೆ ಮಾಡಿದಾಗ ನಷ್ಟ ಉಂಟಾಗಿತ್ತು. ಸ್ವಲ್ಪ ದಿನಗಳ ಬಳಿಕ ಆ ನಷ್ಟವನ್ನು ತುಂಬಿಕೊಳ್ಳಲು ಮತ್ತೊಂದು ಕಂಪನಿಯಲ್ಲಿ ಹೂಡಿಕೆ ಮಾಡುವಂತೆ ಮತ್ತೊಬ್ಬ ಆರೋಪಿ ನಂಬರ್ ಕೊಟ್ಟಿದ್ದಾರೆ. ಆತನಿಗೆ ಕರೆ ಮಾಡಿ 15 ಲಕ್ಷ ರೂ. ಹೂಡಿಕೆ ಮಾಡಿದ್ದು, ಅದು ನಷ್ಟವಾಗಿದೆ. ಇದೇ ರೀತಿ ಬೇರೆ ಬೇರೆ ಕಂಪನಿಗಳಲ್ಲಿ ಹೂಡಿಕೆ ಮಾಡುವಂತೆ ಅಂದಾಜು 50 ಲಕ್ಷ ರೂ. ಹೂಡಿಕೆ ಮಾಡಿಸಿ ಕೊನೆಗೆ ಸೈಬರ್ ಕಳ್ಳರು ಸಂಪರ್ಕ ಕಡಿತ ಮಾಡಿಕೊಂಡಿದ್ದಾರೆ. ನೊಂದ ಲಾಲ್ ದಿಕ್ಕು ತೋಚದೆ ಕೊನೆಗೆ ಠಾಣೆಗೆ ಬಂದು ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವೈಟ್‌ಫೀಲ್ಡ್ ವಿಭಾಗ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.