ಬೆಂಗಳೂರು: ಪತಿ ಕರೊನಾಗೆ ಬಲಿಯಾದ್ದರಿಂದ ನೊಂದ ಪತ್ನಿ, ತನ್ನ ಮಗಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದು, ಇದರಲ್ಲಿ ಮಗಳು ಮೃತಪಟ್ಟರೆ, ತಾಯಿಯ ಪರಿಸ್ಥಿತಿ ಗಂಭೀರವಾಗಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ.
ಯಲಹಂಕ ತಾಲೂಕಿನ ದಿಬ್ಬೂರು ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಈ ಪ್ರಕರಣದಲ್ಲಿ ಪುತ್ರಿ ದಿವ್ಯಾ(12) ಮೃತಪಟ್ಟಿದ್ದು, ತಾಯಿ ವರಲಕ್ಷ್ಮೀ (38) ಪರಿಸ್ಥಿತಿ ಚಿಂತಾಜನಕವಾಗಿದ್ದು, ರಾಜಾನುಕುಂಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ಅತ್ತ ಕೋಟ್ಯಂತರ ರೂಪಾಯಿ ಸಾಲ ಪಡೆದಿದ್ದ ಕಾರ್ಖಾನೆ ಬಂದ್; ಇತ್ತ ಬೇಕಾಬಿಟ್ಟಿಯಾಗಿ ಸಾಲ ನೀಡಿದ್ದ ಅಧಿಕಾರಿ ಸಸ್ಪೆಂಡ್..
ವರಲಕ್ಷ್ಮೀಯ ಪತಿ ಮೂರು ತಿಂಗಳ ಹಿಂದೆ ಕರೊನಾಗೆ ಬಲಿಯಾಗಿದ್ದರು. ಇದರಿಂದ ನೊಂದು ದಿಕ್ಕುಕಾಣದಂತಾಗಿದ್ದ ಈಕೆ ತನ್ನಿಬ್ಬರು ಮಕ್ಕಳೊಂದಿಗೆ ನಿನ್ನೆ ಸಂಜೆ ಮನೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದಳು. ಈ ಸಂದರ್ಭದಲ್ಲಿ ಮನೆಯಿಂದ ಓಡಿಬಂದ ಕಿರಿಯ ಮಗಳು ಕಿರುಚಿಕೊಂಡಿದ್ದು, ತಕ್ಷಣ ಧಾವಿಸಿದ ಸ್ಥಳೀಯರು ಮನೆಯೊಳಗೆ ಹೋಗಿ ಹಿರಿಯ ಮಗಳು ಹಾಗೂ ತಾಯಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆ ಪೈಕಿ ಹಿರಿಯ ಮಗಳು ಬೆಳಗ್ಗೆ ಸಾವಿಗೀಡಾಗಿದ್ದು, ವರಲಕ್ಷ್ಮೀ ಸದ್ಯಕ್ಕೆ ಪ್ರಾಣಾಪಾಯದಿಂದ ಪಾರಾಗಿದ್ದರೂ, ಪರಿಸ್ಥಿತಿ ಚಿಂತಾಜನಕವಾಗಿದೆ. ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.