ಸಾಂದರ್ಭಿಕ ಚಿತ್ರ 
ಜಿಲ್ಲೆ

ಸಮಯಕ್ಕೆ ತಕ್ಕ ಚಿಕಿತ್ಸೆ ಸಿಗದೆ ಉಸಿರುಗಟ್ಟಿ ಮೃತಪಟ್ಟ ವ್ಯಕ್ತಿ; ಜಿಲ್ಲಾಸ್ಪತ್ರೆ ವೈದ್ಯರ ವಿರುದ್ಧ ನಿರ್ಲಕ್ಷ್ಯ ಆರೋಪ..

ದಾವಣಗೆರೆ: ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಸಿಗದೆ ವ್ಯಕ್ತಿಯೊಬ್ಬರು ಉಸಿರುಗಟ್ಟಿ ಸಾವಿಗೀಡಾದ ಪ್ರಕರಣವೊಂದು ನಡೆದಿದೆ. ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಇಂಥದ್ದೊಂದು ಪ್ರಕರಣ ನಡೆದಿದ್ದು, ಇಲ್ಲಿನ ವೈದ್ಯರ ವಿರುದ್ಧ ನಿರ್ಲಕ್ಷ್ಯ ಆರೋಪ ಕೇಳಿಬಂದಿದೆ.

ದಾವಣಗೆರೆ ನಿವಾಸಿ ಹನುಮಂತರಾವ್ (65) ಸಾವಿಗೀಡಾದ ವ್ಯಕ್ತಿ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಇವರನ್ನು ಚಿಕಿತ್ಸೆಗಾಗಿ ದಾವಣಗೆರೆ ಜಿಲ್ಲಾಸ್ಪತ್ರೆಗೆ ಆ್ಯಂಬುಲೆನ್ಸ್​ನಲ್ಲಿ ಕರೆದುಕೊಂಡು ಬರಲಾಗಿತ್ತು.

ಆದರೆ ಆಸ್ಪತ್ರೆಯವರು ಇವರನ್ನು ತಕ್ಷಣಕ್ಕೆ ದಾಖಲಿಸಿಕೊಳ್ಳಲಿಲ್ಲ ಎನ್ನಲಾಗಿದೆ. ಅರ್ಧ ಗಂಟೆಗೂ ಹೆಚ್ಚು ಕಾಲ ರೋಗಿಯನ್ನು ದಾಖಲಿಸಿಕೊಳ್ಳದ ಆಸ್ಪತ್ರೆ ಸಿಬ್ಬಂದಿ, ರೋಗಿಯೊಂದಿಗೆ ಬಂದವರನ್ನು ಓಡಾಡಿಸಿದೆ. ಪರಿಣಾಮವಾಗಿ ರೋಗಿ ಆ್ಯಂಬುಲೆನ್ಸ್​ನಲ್ಲೇ ಉಸಿರಾಟಕ್ಕೆ ಪರದಾಡುವಂತಾಗಿತ್ತು.

ಅರ್ಧ ಗಂಟೆ ಬಳಿಕ ಆಸ್ಪತ್ರೆ ಸಿಬ್ಬಂದಿ ರೋಗಿಯನ್ನು ದಾಖಲಿಸಿಕೊಂಡಿದ್ದಾರೆ. ದಾಖಲಿಸಿಕೊಂಡ ತಕ್ಷಣ, ಮಾರ್ಗ ಮಧ್ಯದಲ್ಲಿ‌ ರೋಗಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದಲೇ ಈ ಸಾವು ಸಂಭವಿಸಿದೆ ಎಂದು ಹನುಮಂತರಾವ್ ಅವರ ಪುತ್ರ ಆರೋಪಿಸಿದ್ದಾರೆ.