Pahalgam Terror Attack : ಕಾಶ್ಮೀರದ ಪಹಲ್ಗಾಮ್ನಲ್ಲಿ ನಿನ್ನೆ ನಡೆದ ಉಗ್ರರ ಗುಂಡಿನ ದಾಳಿ ವೇಳೆ ಹರಪನಹಳ್ಳಿಯ ಕುಟುಂಬವೂ ಘಟನೆಗೆ ಸಾಕ್ಷಿಯಾಗಿದ್ದು, ಅಲ್ಲಿಂದ ಸುರಕ್ಷಿತವಾಗಿ ಹೊರಬಂದು ಮಾಹಿತಿ ನೀಡಿದೆ.
ಇದೇ ತಿಂಗಳ 18 ರಂದು ಕಾಶ್ಮೀರಕ್ಕೆ ಕುಟುಂಬ ಸಮೇತ ಪ್ರವಾಸ ಕೈಗೊಂಡಿದ್ದ ಟಿ. ಎಂ. ರಾಜಶೇಖರ ಕುಟುಂಬವು ಕಾಶ್ಮೀರದ ಗುಲ್ಮಾರ್ಗ ವೀಕ್ಷಿಸಿ ಭಾನುವಾರ ಪೆಹಲ್ಗಾಮ್ಗೆ ತೆರಳಿದ್ದರು. ಈ ಬಗ್ಗೆ ವಿಜಯವಾಣಿಗೆ ದೂರವಾಣಿ ಮೂಲಕ ಮಾತನಾಡಿ ಮಾಹಿತಿ ನೀಡಿರುವ ಟಿ.ಎಂ.ರಾಜಶೇಖರ್, ಪಹಲ್ಗಾಮ್ ತಲುಪಲು ಸುಮಾರು 10 ಸಾವಿರ ಅಡಿ ಎತ್ತರವನ್ನು ಕುದುರೆ ಸವಾರಿಯಲ್ಲೇ ತೆರಳಿದ್ದು, ಟಿ.ಎಂ. ರಾಜಶೇಖರ ಜತೆ ಅವರ ಪತ್ನಿ ಉಮಾದೇವಿ, ಮಗಳು ಡಾ.ಗೌರಿಕಾ ಹಾಗೂ ಅಳಿಯ ದೊಡ್ಡಬಸಯ್ಯ ಎತ್ತರದ ಪ್ರದೇಶವನ್ನು ಮಧ್ಯಾಹ್ನ 2:18 ಕ್ಕೆ ತಲುಪಿದ್ದಾರೆ.
ಸಮೀಪದಲ್ಲೇ ಇದ್ದ ಅಂಗಡಿಯಲ್ಲಿ ಕೇಸರಿ ಖರೀದಿಸಲು ತೆರಳಿದ್ದರು. ಆಗ ಐವರು ಉಗ್ರರು ಏಕಾಏಕಿ ಧಾವಿಸಿ ತಾವಿದ್ದ ಸ್ಥಳದಿಂದ ಕೆಲವೇ ಕೆಲ ಮೀಟರ್ಗಳ ಅಂತರದಲ್ಲಿದ್ದ ವಿಶಾಲವಾದ ಪ್ರದೇಶದಲ್ಲಿ ಆಗಲೇ ಜಮಾಯಿಸಿದ್ದ ಪ್ರವಾಸಿಗರಿಗೆ ಗುಂಡಿನ ದಾಳಿ ನಡೆಸಿದರು. ದಿಢೀರಾಗಿ ಉಗ್ರರಿಂದ ನಡೆದ ದಾಳಿಯಿಂದ ಪಾರಾಗಲು ಕುಟುಂಬದವರು ಸ್ಥಳದಿಂದ ಓಡಿ ಪಾರಾಗಿದ್ದಾಗಿ ಪತ್ರಿಕೆಗೆ ತಿಳಿಸಿದ್ದಾರೆ.
ದಾಳಿ ನಡೆದ ಸ್ಥಳದಿಂದ ಆಡಳಿತಕ್ಕೆ ಮಾಹಿತಿ ನೀಡಲು ಮೊಬೈಲ್ ನೆಟ್ವರ್ಕ ಅಲ್ಲಿ ಇಲ್ಲದಿರುವುದು ತೊಡಕಾಯಿತು ಎಂದು ಸುರಕ್ಷಿತ ಸ್ಥಳ ತಲುಪಿದ ನಂತರ ಪತ್ರಿಕೆಗೆ ಕರೆ ಮಾಡಿ ರಾಜಶೇಖರ್ ಮಾಹಿತಿ ನೀಡಿದ್ದಾರೆ. ಕರ್ನಾಟಕದ ಯಾವ ಪ್ರವಾಸಿಗರೂ ಇಲ್ಲಿಗೆ ಪ್ರವಾಸ ಮಾಡೋದು ಬೇಡ. ಈ ಸ್ಥಳವು ನೋಡಲು ಸ್ವರ್ಗದಂತೆ ಇರುವುದು ಅಕ್ಷರಶಃ ಸತ್ಯ. ಆದರೆ ಉಗ್ರರು ಯಾವ ಸಂಧರ್ಭದಲ್ಲಿ ಗುಂಡಿನ ದಾಳಿ ನಡೆಸುತ್ತಾರೆ ಎನ್ನುವುದು ಅರಿವಿಗೆ ಬರುವುದಿಲ್ಲ. ಪೂರ್ವಜರು ಮಾಡಿದ ಪುಣ್ಯದ ಫಲದಿಂದ ನಮ್ಮ ಕುಟುಂಬ ಮರು ಜೀವ ಪಡೆದು ಇಂದು ಸುರಕ್ಷಿತ ಸ್ಥಳಕ್ಕೆ ಬಂದು ತಲುಪಿದ್ದೇವೆ ಎಂದು ತಮಗಾದ ಅನುಭವ ವಿವರಿಸಿದ್ದಾರೆ.
ಗುರುವಾರ ಕಾಶ್ಮೀರದಿಂದ ಕರ್ನಾಟಕಕ್ಕೆ ತೆರಳಲು ವಿಮಾನದ ಟಿಕೆಟ್ ಬುಕ್ ಆಗಿದೆ. ಘಟನೆ ನಂತರ ವಿಮಾನ ಟಿಕೆಟ್ ದರವನ್ನು ದಿಢೀರ್ ಆಗಿ ಹೆಚ್ಚಿಸಲಾಗಿದೆ ಎಂದು ಟಿ.ಎಂ. ರಾಜಶೇಖರ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.