ಪಡುಬಿದ್ರಿ ಬೀಚ್‌ನಲ್ಲಿ ಪ್ರವಾಸೋದ್ಯಮ ಇಲಾಖೆ ನಿರ್ಮಿಸಿರುವ ವಾಚಿಂಗ್ ಟವರ್ ಹಾಗೂ ಹಟ್ ಕಡಲ್ಕೊರೆತದಿಂದ ಅಪಾಯದಲ್ಲಿದೆ. 
ಜಿಲ್ಲೆ

ಪಡುಬಿದ್ರಿಯಲ್ಲಿ ವಾಚಿಂಗ್ ಟವರ್,ಹಟ್ ಸಮುದ್ರಪಾಲಾಗುವ ಭೀತಿ

Avinash R

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ಕೆಲದಿನಗಳಿಂದ ಶಾಂತವಾಗಿದ್ದ ಕಡಲು ಬುಧವಾರ ಪ್ರಕ್ಷುಬ್ಧಗೊಂಡಿದ್ದು, ಪಡುಬಿದ್ರಿ ಮುಖ್ಯ ಬೀಚ್‌ನಲ್ಲಿ ಅಭಿವೃದ್ಧಿ ಕಾಮಗಾರಿ ಸಮುದ್ರ ಪಾಲಾಗುವ ಭೀತಿ ಉಂಟಾಗಿದೆ.

ಈ ಪ್ರದೇಶದಲ್ಲಿ ಕಡಲ್ಕೊರೆತ ಆರಂಭಗೊಂಡು ಈಗಾಗಲೇ ಬೀಚ್ ಬಳಿ ಅಳವಡಿಸಿದ್ದ ಇಂಟರ್‌ಲಾಕ್, ಬೀದಿ ದೀಪ, ತೆಂಗಿನಮರ ಹಾಗೂ ಮೀನುಗಾರರ ಶೆಡ್ ಸಮುದ್ರ ಪಾಲಾಗಿದೆ. ಕಡಲ್ಕೊರೆತ ತೀವ್ರಗೊಂಡಿದ್ದ ಸಂದರ್ಭ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹಾಗೂ ಮಾಜಿ ಸಚಿವ ವಿನಯಕುಮಾರ್ ಸೊರಕೆ ಸಹಿತ ಪ್ರಮುಖರು ಭೇಟಿ ನೀಡಿ ಪರಿಶೀಲಿಸಿದ್ದರು.

ಬಳಿಕ ಸ್ವಲ್ಪಮಟ್ಟಿಗೆ ತಗ್ಗಿದ್ದ ಕೊರೆತ ಈಗ ಮತ್ತೆ ಕಾಣಿಸಿಕೊಂಡಿದ್ದು, ಪ್ರವಾಸೋದ್ಯಮ ಇಲಾಖೆ ಮೂಲಕ ಕೆಲವರ್ಷಗಳ ಹಿಂದೆ ನಿರ್ಮಿಸಿದ್ದ ಒಂದೂವರೆ ಕೋಟಿ ರೂ. ವೆಚ್ಚದ ವಾಚಿಂಗ್ ಟವರ್ ಹಾಗೂ ಹಟ್ ಸಮುದ್ರ ಪಾಲಾಗುವ ಅಪಾಯ ಎದುರಿಸುತ್ತಿದೆ. ಮಾಜಿ ಸಚಿವ ವಿನಯಕುಮಾರ್ ಸೊರಕೆ ಸೂಚನೆಯಂತೆ ಪಾಂಗಾಳದ ಗುತ್ತಿಗೆದಾರರೊಬ್ಬರು ಬುಧವಾರ ತಾತ್ಕಾಲಿಕ ಕಾಮಗಾರಿ ಆರಂಭಿಸಿದ್ದಾರೆ.