ಜಿಲ್ಲೆ

ದೇವಳ ಉತ್ಸವಕ್ಕೆ ಸಾವಯವ ಕೃಷಿ

Avinash R

ಕುಂಬಳೆ: ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ಕ್ಷೇತ್ರ ಬ್ರಹ್ಮಕಲಶೋತ್ಸವ ಮೇ 6ರಿಂದ 12ರ ತನಕ ಜರುಗಲಿದ್ದು, ಇದಕ್ಕೆ ಪೂರಕವಾಗಿ ಅಂಗಡಿಮೊಗರು ಗ್ರಾಮ ವ್ಯಾಪ್ತಿಯ ಭಕ್ತ ಜನರ ಸಹಭಾಗಿತ್ವದಲ್ಲಿ ಪುತ್ತಿಗೆ ಗ್ರಾಪಂ ಕೃಷಿ ಭವನದ ಸಹಕಾರದೊಂದಿಗೆ ಸಾವಯವ ಕೃಷಿ ಯೋಜನೆಗೆ ಸೋಮವಾರ ಚಾಲನೆ ನೀಡಲಾಯಿತು.

ಪುತ್ತಿಗೆ ಗ್ರಾಪಂ ಅಧ್ಯಕ್ಷ ಡಿ.ಸುಬ್ಬಣ್ಣ ಆಳ್ವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪರಂಪರಾಗತವಾಗಿ ನಡೆದುಕೊಂಡು ಬರುತ್ತಿದ್ದ ಸಾವಯವ ಕೃಷಿ ಕಾರ್ಯ ಇತ್ತೀಚಿನ ದಿನಗಳಲ್ಲಿ ಮೂಲೆಗುಂಪಾಗುತ್ತಿದೆ. ಇದನ್ನು ಪುನರ್ಜೀವನಗೊಳಿಸಿ ಯುವ ಜನತೆಗೆ ಪ್ರೋತ್ಸಾಹದಾಯಕವಾಗುವ ಜತೆಗೆ ಗ್ರಾಮ ದೇವರ ಉತ್ಸವಕ್ಕೆ ಸಮರ್ಪಿಸುವ ಮಹತ್ತರ ಯೋಜನೆ ನಾಡಿಗೆ ಮಾದರಿಯಾಗಿ ಮೂಡಿಬರಲೆಂದು ಹಾರೈಸಿದರು.

ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಡಿ.ದಾಮೋದರ ಅಧ್ಯಕ್ಷತೆ ವಹಿಸಿದ್ದರು. ಪುತ್ತಿಗೆ ಕೃಷಿ ಭವನದ ಕೃಷಿ ಅಧಿಕಾರಿ ದಿನೇಶ್ ಪೆರುಂಬಳ ಮಾತನಾಡಿ, ಕ್ಷೇತ್ರ ಬ್ರಹ್ಮಕಲಶೋತ್ಸವಕ್ಕೆ ಅಗತ್ಯವಾಗಿರುವ ತರಕಾರಿ ಸ್ವತಃ ಬೆಳೆಸುವ ಮೂಲಕ ಮಹತ್ತರ ಹೆಜ್ಜೆ ಇರಿಸಿದ ಈ ಯೋಜನೆ ನಾಡಿಗೆ ಮಾದರಿಯಾಗಿದೆ ಎಂದರು.

ಗ್ರಾಪಂ ಕೃಷಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಪಾಲಾಕ್ಷ ರೈ, ವಾರ್ಡ್ ಸದಸ್ಯೆ ಪ್ರೇಮ ಎಸ್.ರೈ, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಶಂಕರ ರೈ, ಸೇವಾ ಸಮಿತಿ ಕಾರ್ಯದರ್ಶಿ ಕೇಶವ ಮೊದಲಾದವರು ಮಾತನಾಡಿದರು. ರಾಧಾಕೃಷ್ಣ ಡಿ.ಎನ್. ಸ್ವಾಗತಿಸಿದರು. ಪ್ರಭಾಕರ ಡಿ. ವಂದಿಸಿದರು.

ವಿವಿಧೆಡೆ ತರಕಾರಿ ಬೆಳೆ

ಅಂಗಡಿಮೊಗರು, ದೇಲಂಪಾಡಿ ನೈಮೊಗರು, ಮಂಟಪಾಡಿ, ಅಮಿನೆ, ಕೋರಿಕ್ಕಾರ್ ಮೊದಲಾದೆಡೆ ಬ್ರಹ್ಮಕಲಶೋತ್ಸವಕ್ಕಾಗಿ ವಿವಿಧ ತರದ ಸಾವಯವ ತರಕಾರಿ ಬೆಳೆಸಲು ನಿರ್ಧರಿಸಲಾಗಿದ್ದು, ಸಮಿತಿ ರಚಿಸಿ ಸಂಚಾಲಕರನ್ನು ನೇಮಿಸಲಾಗಿದೆ. ಅಂಗಡಿಮೊಗರು ಸೇವಾ ಸಹಕಾರಿ ಬ್ಯಾಂಕ್ ಕಾರ್ಯದರ್ಶಿ ವಿಠಲ ರೈ, ಆನಂದ ಎಂ.ಕೆ., ಶಿವಪ್ಪ ರೈ, ಊರ ಹಿರಿಯರಾದ ಬಾಲಕೃಷ್ಣ ರೈ ನೈಮುಗೇರು, ಕೊಟ್ಯಣ್ಣ ರೈ, ಮೈಂದಪ್ಪ ರೈ, ಮಹಿಳಾ ಸಮಿತಿ, ಕುಟುಂಬಶ್ರೀ ಘಟಕ ಸದಸ್ಯೆಯರು ಭಾಗವಹಿಸಿದ್ದರು.