ಜಿಲ್ಲೆ

ಯುವಕರ ಸಮಾಜಮುಖಿ ಕಾರ್ಯ ಮಾದರಿ : ಎಂ.ವಿ.ಭಟ್ ಮೆಚ್ಚುಗೆ

ಸೌಮ್ಯ ಆರ್

ಬೆಳ್ತಂಗಡಿ: ಹಿಂದು ಯುವಶಕ್ತಿ ಆಲಡ್ಕ ಕ್ಷೇತ್ರ ಸಮಾಜ ಸೇವಾ ಸಂಘಟನೆ ರಾಜಕೀಯ ರಹಿತ ಎಂಬುದೇ ಖುಷಿಯ ವಿಚಾರ. ಯುವ ಸಮುದಾಯ ಒಟ್ಟಾಗಿ ಹಲವು ವಿಧದ ಸಮಾಜ ಸೇವೆ ಮಾಡುತ್ತಿರುವುದು ಶ್ಲಾಘನೀಯ ಎಂದು ನಿವೃತ್ತ ಮೇಜರ್ ಜನರಲ್ ಎಂ.ವಿ.ಭಟ್ ಹೇಳಿದರು.

ಅಳದಂಗಡಿ ಶ್ರೀ ಸೋಮನಾಥೇಶ್ವರಿ ದೇವಸ್ಥಾನದ ವಠಾರದಲ್ಲಿ ಹಿಂದು ಯುವಶಕ್ತಿ ಆಲಡ್ಕ ಕ್ಷೇತ್ರ ಸಮಾಜ ಸೇವಾ ಸಂಘಟನೆ ಆಯೋಜಕತ್ವದಲ್ಲಿ, ಅಂಗಾಂಗ ದಾನ ನೋಂದಣಿ ಕಾರ್ಯಕ್ರಮ ಹಾಗೂ ಆರೋಗ್ಯ ಶಿಬಿರ ಮತ್ತು ರಕ್ತದಾನ ಶಿಬಿರ ಹಾಗೂ ಕಾರ್ಗಿಲ್ ವೀರ ಯೋಧರಿಗೆ ಗೌರವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬೆಂಗಳೂರು ನಿರಾಶ್ರಿತರ ಆಶ್ರಮದ ಜನಸ್ನೇಹಿ ಯೋಗೀಶ್ ಮಾತನಾಡಿ, ದುಡ್ಡಿದ್ದವರ ಕೈಯಲ್ಲಿ ಆಗದ ಕೆಲಸವನ್ನು ದುಡ್ಡಿಲ್ಲದವರು ಸೇರಿ ಸಂಘಟನೆಯ ಮೂಲಕ ಮಾಡುತ್ತಿರುವುದು ದೇವರು ಮೆಚ್ಚುವ ಕಾರ್ಯ ಎಂದರು.

ಸಂಘಟನೆಯ ಗೌರವಾಧ್ಯಕ್ಷ ಶಿವಪ್ರಸಾದ ಅಜಿಲ ಅಧ್ಯಕ್ಷತೆ ವಹಿಸಿದ್ದರು. ಕಾರ್ಗಿಲ್ ಯುದ್ಧ ಸಂದರ್ಭ ತನ್ನ ಕೈಗಳನ್ನು ಕಳೆದುಕೊಂಡ ನಿವೃತ್ತ ಯೋಧ ರಂಗಪ್ಪ ಹುಲಿಯಪ್ಪ ಆಲೂರು ಗೌರವ ಸ್ವೀಕರಿಸಿದರು. ನಿವೃತ್ತ ಯೋಧ ಹರೀಶ್ ರೈ ಪಿ, ಸಾಮಾಜಿಕ ಕಾರ್ಯಕರ್ತ ರವಿ ಕಕ್ಕೆಪದವು, ಜನಸ್ನೇಹಿ ಯೋಗೀಶ್ ಅವರನ್ನು ಸನ್ಮಾನಿಸಲಾಯಿತು. ನಿವೃತ ಸೈನಿಕರಾದ ತಂಗಚ್ಚನ್, ಅನಿಕ್ ಡಿ.ಎಲ್, ದಿನೇಶ್, ಭಾಸ್ಕರ್ ನಾಯ್ಕ, ರಮಾನಾಥ ರೈ, ಕೃಷ್ಣಾನಂದ ಶೆಟ್ಟಿ ಅವರನ್ನು ಗೌರವಿಸಲಾಯಿತು.

ವಸಂತ ಪೂಜಾರಿ ಅಂಡಿಂಜೆ, ಕೆ.ಎಂ.ಸಿ. ಆಸ್ಪತ್ರೆಯ ಡಾ.ಕಾರ್ತಿಕ್ ಕೆ.ಆರ್.ರಾವ್ ಅಮನಬೈಲು, ಮಂಗಳೂರು ವೆನ್ಲಾಕ್ ಆಸ್ಪತ್ರೆಯ ಅಂಗಾಂಗ ಕಸಿ ಸಂಯೋಜಕಿ ಪದ್ಮಾ ವೇಣೂರು, ಉದ್ಯಮಿ ನಾಗಕುಮಾರ್ ಜೈನ್ ಉಪಸ್ಥಿತರಿದ್ದರು.

ಹಿಂದು ಯುವಶಕ್ತಿ ಅಧ್ಯಕ್ಷ ದೇವದಾಸ್ ಕೆ.ಸಾಲ್ಯಾನ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಯುವ ಸಾಹಿತಿ ಚಂದ್ರಹಾಸ್ ಬಳಂಜ ನಿರೂಪಿಸಿದರು. ಹರೀಶ್ ಕಲ್ಲಾಜೆ ವಂದಿಸಿದರು. ಹಿಂದು ಯುವಶಕ್ತಿ ಆಲಡ್ಕ ಕ್ಷೇತ್ರ ಸಮಾಜ ಸೇವಾ ಸಂಘಟನೆಯ ಸದಸ್ಯರು ಸಹಕರಿಸಿದರು.

ಕಾರ್ಗಿಲ್ ಯೋಧರ ಬೃಹತ್ ಮೆರವಣಿಗೆ

ಬೆಳಗ್ಗೆ ಆರೋಗ್ಯ ಮೇಳವನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸ ಡಾ.ಪದ್ಮಪ್ರಸಾದ್ ಅಜಿಲ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಡಾ.ಶಶಿಧರ್ ಡೋಂಗ್ರೆ, ಶಿರ್ತಾಡಿ ನವಚೇತನಾ ಕ್ಲಿನಿಕ್‌ನ ಡಾ.ಕೃಷ್ಣ ರಾಜ್ ಭಟ್, ನಾಟಿ ವೈದ್ಯೆ ಬೇಬಿ ಪೂಜಾರಿ, ಅರ್ಬಟ್, ರೆಡ್‌ಕ್ರಾಸ್‌ನ ಪ್ರವೀಣ್, ಬೆಳ್ತಂಗಡಿ ಯುವವಾಹಿನಿ ಅಧ್ಯಕ್ಷ ಸದಾಶಿವ ಪೂಜಾರಿ ಊರ ಇದ್ದರು. ವಿದ್ಯಾರ್ಥಿಗಳಿಂದ ನೃತ್ಯ ವೈಭವ ನಡೆಯಿತು. ಬೆಳಗ್ಗೆ 10ಕ್ಕೆ ಅಳದಂಗಡಿ ಪೇಟೆಯಿಂದ ಕಾರ್ಗಿಲ್ ಯೋಧರ ಬೃಹತ್ ಮೆರವಣಿಗೆಗೆ ಡಾ.ಎನ್.ಎಂ.ತುಳಪುಳೆ ಅಳದಂಗಡಿ ಚಾಲನೆ ನೀಡಿದರು. ವಿವಿಧ ಭಜನಾ ತಂಡ, ಚೆಂಡೆ ವಾದ್ಯ ಸಂಗೀತದೊಂದಿಗೆ ಸೋಮನಾಥೇಶ್ವರಿ ದೇವಸ್ಥಾನದ ವಠಾರದವರೆಗೆ ಮೆರವಣಿಗೆ ನಡೆಯಿತು.