ಶ್ರೀನಿವಾಸ 
ಜಿಲ್ಲೆ

ವಿಚ್ಛೇದಿತೆಯ ಸಹವಾಸ, ಈ ಶ್ರೀನಿವಾಸನಿಗೀಗ ಸೆರೆವಾಸ; ಅವಳು ಬಿಟ್ಟು ಹೋಗಿದ್ದಕ್ಕೆ ಈತ ಹೀಗೆ ಮಾಡಿದ..!

ಬೆಂಗಳೂರು: ವಿಚ್ಛೇದಿತೆಯ ಒಡನಾಟ ಹೊಂದಿ ಅವಳೊಂದಿಗೆ ಲಿವಿಂಗ್ ಟುಗೆದರ್​ನಲ್ಲಿದ್ದ ಪ್ರೇಮಿಗೆ ಕೊನೆಗೆ ಆಕೆಯೇ ಕೈಕೊಟ್ಟು ಹೋಗಿದ್ದಾಳೆ. ಇದಕ್ಕೆ ಪ್ರತೀಕಾರವಾಗಿ ಶ್ರೀನಿವಾಸನೆಂಬ ಈತ ಮಾಡಿದ ಕೆಲಸ ಇವನು ಮಾತ್ರವಲ್ಲದೆ ಇನ್ನು ಐದು ಮಂದಿ ಸೆರೆವಾಸ ಅನುಭವಿಸುವಂತೆ ಮಾಡಿದೆ.

ಈ ಪ್ರಕರಣ ಸಂಬಂಧ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ. ರಾಜಗೋಪಾಲನಗರದ ಶ್ರೀನಿವಾಸ್ (32) ಹಾಗೂ ಆತನ ಸಹಚರರಾದ ಪ್ರತಾಪ್ (28), ಆಕಾಶ್ (31), ಹುಚ್ಚೇಗೌಡ (34), ಶಿವ (31), ಗಂಗಾಧರ್ (34) ಬಂಧಿತರು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಕಾರನ್ನು ಜಪ್ತಿ ಮಾಡಲಾಗಿದೆ.

ಆರೋಪಿ ಶ್ರೀನಿವಾಸ್ ಫೈನಾನ್ಸ್ ಕಂಪನಿಯಲ್ಲಿ ವಾಹನಗಳನ್ನು ಸೀಜ್ ಮಾಡುವ ಕೆಲಸ ಮಾಡಿಕೊಂಡಿದ್ದ. ಈತ ಆಂಧ್ರಹಳ್ಳಿ ಮುಖ್ಯರಸ್ತೆಯ ನಿವಾಸಿ 23 ವರ್ಷದ ಯುವತಿಯನ್ನು ಪ್ರೀತಿಸಿ 4 ತಿಂಗಳಿಂದ ಆಕೆಯೊಂದಿಗೆ ಲಿವಿಂಗ್ ಟುಗೆದರ್‌ನಲ್ಲಿ ವಾಸಿಸುತ್ತಿದ್ದ. ಜ.17ರಂದು ಇಬ್ಬರ ನಡುವೆ ಸಣ್ಣ-ಪುಟ್ಟ ವಿಚಾರಕ್ಕೆ ಮನಸ್ತಾಪ ಉಂಟಾಗಿತ್ತು. ಇದರಿಂದ ನೊಂದು ಯುವತಿ ಆರೋಪಿ ಶ್ರೀನಿವಾಸನನ್ನು ತೊರೆದಿದ್ದಳು. ಪದೇಪದೆ ಯುವತಿಗೆ ಕರೆ ಮಾಡುತ್ತಿದ್ದ ಆರೋಪಿ, ಮತ್ತೆ ತನ್ನೊಂದಿಗೆ ಬಂದು ಇರುವಂತೆ ಒತ್ತಾಯ ಮಾಡುತ್ತಿದ್ದ. ಆದರೆ, ಯುವತಿ ಇದಕ್ಕೆ ನಿರಾಕರಿಸಿದ್ದಳು.

ಇದರಿಂದ ಸಿಟ್ಟಾದ ಶ್ರೀನಿವಾಸ ಆಕೆಯ ಸಹೋದರ ವೆಂಕಟೇಶ್​ ಎಂಬಾತನನ್ನು ಅಪಹರಿಸಿದ್ದ. ಜ.20ರಂದು ರಾತ್ರಿ 9 ಗಂಟೆಗೆ ವೆಂಕಟೇಶ್ ಕೆಲಸ ಮುಗಿಸಿಕೊಂಡು ಬರುತ್ತಿದ್ದಾಗ ಆತನನ್ನು ಭೇಟಿಯಾದ ಶ್ರೀನಿವಾಸ್, ನಿನ್ನ ಬಳಿ ಸ್ವಲ್ಪ ಮಾತನಾಡಬೇಕು ಎಂದು ಕಾರಿನಲ್ಲಿ ಹೊಸಕೋಟೆ-ಕೋಲಾರಕ್ಕೆ ಕರೆದೊಯ್ದು ಹಲ್ಲೆ ನಡೆಸಿದ್ದ. ಅಲ್ಲದೆ ತನ್ನ ಜೊತೆ ಬರದಿದ್ದರೆ ಸಹೋದರನನ್ನು ಕೊಲೆ ಮಾಡುವುದಾಗಿ ಆಕೆಗೆ ಕರೆ ಮಾಡಿ ಬೆದರಿಕೆಯನ್ನು ಒಡ್ಡಿದ್ದ.

ಈ ಸಂಬಂಧ ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಗಿಳಿದ ಪೊಲೀಸರು ಶ್ರೀನಿವಾಸನ ಜತೆಗೆ ಆತನಿಗೆ ಸಹಕರಿಸಿದ ಐವರು ಸಹಚರರನ್ನು ಕೂಡ ಬಂಧಿಸಿದ್ದಾರೆ.