ಬೆಂಗಳೂರು: ವಿದೇಶಿ ಫುಟ್ಬಾಲ್ ಆಟಗಾರ ವೋಹ್ನ್ ಟ್ರೋಲ್ಫೆ ಅವರ ವಿಲ್ಲಾದಲ್ಲಿ ವಜ್ರದ ಮೂರು ಉಂಗುರಗಳನ್ನು ಕದ್ದ ಆರೋಪಿ ಕೊನೆಗೂ ಎರಡೂವರೆ ತಿಂಗಳ ಬಳಿಕ ಸಿಕ್ಕಿಬಿದ್ದಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸರ ಕಾರ್ಯಾಚರಣೆಯಲ್ಲಿ ಬಂಧಿತನಾಗಿರುವ ಈ ಆರೋಪಿ ಹೆಸರು ಮಂಜುನಾಥ.
ಇಂದು ಅನ್ನಪೂರ್ಣೇಶ್ವರಿ ನಗರದಲ್ಲಿ ಮಂಜುನಾಥ ವಜ್ರದುಂಗುರ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಆರೋಪಿಯನ್ನು ವಶಕ್ಕೆ ಪಡೆದ ಅನ್ನಪೂರ್ಣೇಶ್ವರಿ ನಗರ ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಫುಟ್ಬಾಲ್ ಆಟಗಾರನ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.
ಫುಟ್ಬಾಲ್ ಆಟಗಾರ ವೋಹ್ನ್ ಟ್ರೋಲ್ಫೆ ನಂದಿ ರಸ್ತೆಯ ಪ್ರೆಸ್ಟೀಜ್ ಗಾಲ್ಫ್ ಶೈರ್ನಲ್ಲಿ ವಿಲ್ಲಾ ಹೊಂದಿದ್ದರು. ಆಗಸ್ಟ್ 28ನೇ ತಾರೀಕು ಈ ವಿಲ್ಲಾಗೆ ಹೊಕ್ಕಿದ್ದ ಮಂಜುನಾಥ 25 ಲಕ್ಷ ರೂಪಾಯಿ ಮೌಲ್ಯದ 3 ಡೈಮಂಡ್ ಉಂಗುರಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದ. ಈ ಕುರಿತು ವಿಶ್ವನಾಥಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ, ಆರೋಪಿಯ ಪತ್ತೆ ಆಗಿರಲಿಲ್ಲ. ಆರೋಪಿ ಮಂಜುನಾಥ ಫುಟ್ಬಾಲ್ ಆಟಗಾರನ ವಿಲ್ಲಾದಲ್ಲೇ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದು, ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ.