ವಿಜಯಪುರ: ಎಮ್ಮೆಗಳನ್ನು ಸಾಗಿಸುತ್ತಿದ್ದ ಕ್ಯಾಂಟರ್ ಹಾಗೂ ಲಾರಿ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಒಬ್ಬ ಸ್ಥಳದಲ್ಲೇ ಮೃತಪಟ್ಟಿದ್ದರೆ, ಮೂವರ ಸ್ಥಿತಿ ಚಿಂತಾಜನಕವಾಗಿದೆ. ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕಿನ ರೋಣಿಹಾಳ ಬಳಿ ಈ ಅಪಘಾತ ಸಂಭವಿಸಿದೆ.
ಎಮ್ಮೆಗಳನ್ನು ಸಾಗಾಟ ಮಾಡುತ್ತಿದ್ದ ಕ್ಯಾಂಟರ್ ವಿಜಯಪುರದಿಂದ ಹುಬ್ಬಳ್ಳಿ ಕಡೆಗೆ ಹೋಗುತ್ತಿದ್ದು, ಲಾರಿ ಹುಬ್ಬಳ್ಳಿಯಿಂದ ವಿಜಯಪುರ ಕಡೆಗೆ ಸಾಗುತ್ತಿತ್ತು. ಎರಡೂ ಮುಖಾಮುಖಿ ಡಿಕ್ಕಿಯಾಗಿದ್ದು, ಅಪಘಾತದ ತೀವ್ರತೆಗೆ ಕ್ಯಾಂಟರ್ನಲ್ಲಿದ್ದ ಒಬ್ಬ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಲಾರಿಯಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಅವರ ಪರಿಸ್ಥಿತಿ ಚಿಂತಾಜನಕವಾಗಿದೆ.
ಇದನ್ನೂ ಓದಿ: ಅಪಾರ್ಟ್ಮೆಂಟಲ್ಲಿ ಸಿಲಿಂಡರ್ ಸ್ಫೋಟ, ಧಗಧಗಿಸುತ್ತಿರುವ ಮನೆಗಳು; ನೋಡನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆಗೆ ತುತ್ತಾದ ಮಹಿಳೆ
TN 52 F 7099 ನಂಬರಿನ ತಮಿಳುನಾಡು ಮೂಲದ ಲಾರಿ. ಎಂಎಚ್ 13 ಎಎಕ್ಸ್ 4999 ನಂಬರಿನ ಕ್ಯಾಂಟರ್ನಲ್ಲಿ ಎಮ್ಮೆಗಳನ್ನು ಸಾಗಿಸುತ್ತಿದ್ದರೆ, ಟಿಎನ್ 52 ಎಫ್ 7099 ನೋಂದಣಿ ಸಂಖ್ಯೆಯ ಲಾರಿಯಲ್ಲಿ ಸರಕು ಸಾಗಣೆ ಮಾಡಲಾಗುತ್ತಿತ್ತು. ಈ ಅಪಘಾತದಲ್ಲಿ ಕ್ಯಾಂಟರ್ನಲ್ಲಿದ್ದ ಐದಕ್ಕೂ ಹೆಚ್ಚು ಎಮ್ಮೆಗಳು ಕೂಡ ಸಾವಿಗೀಡಾಗಿವೆ. ಕೊಲ್ಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದ್ದು, ರಸ್ತೆ ತಡೆ ಉಂಟಾಗಿ ಸಂಚಾರ ಅಸ್ತವ್ಯಸ್ತವಾಗಿದೆ.