ಅವಘಡ ಸಂಭವಿಸಿದ ಸ್ಥಳ  
ಜಿಲ್ಲೆ

ನಿರ್ಮಾಣದ ಹಂತದ ಕಟ್ಟಡದ ಸಂಪ್​ನೊಳಗೆ ಬಿದ್ದು ಮಗು ಸಾವು; ಇನ್ನೊಂದು ಮಗುವಿಗಾಗಿ ಮುಂದುವರಿದ ಹುಡುಕಾಟ

Webdesk - Ravikanth

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಳೆ ಅವಾಂತರ ಮುಂದುವರಿದಿದ್ದು, ಇದೀಗ ಮಗುವೊಂದು ಬಲಿಯಾಗಿದ್ದರೆ, ಮತ್ತೊಂದು ಮಗುವಿಗಾಗಿ ಹುಡುಕಾಟ ಮುಂದುವರಿದಿದೆ. ಬೆಂಗಳೂರಿನ ಎಚ್​ಬಿಆರ್​ ಲೇಔಟ್​ನಲ್ಲಿ ಇಂಥದ್ದೊಂದು ದುರಂತ ಸಂಭವಿಸಿದೆ.

ಈ ಬಡಾವಣೆಯ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿನ ಸಂಪ್​ನೊಳಗೆ ಮಳೆನೀರು ತುಂಬಿಕೊಂಡಿದ್ದು, ಮಗುವೊಂದು ಅದರಲ್ಲಿ ಬಿದ್ದು ಸಾವಿಗೀಡಾಗಿದೆ. ಜೊತೆಗಿದ್ದ ಇನ್ನೊಂದು ಮಗು ನಾಪತ್ತೆಯಾಗಿದ್ದು, ಹುಡುಕಾಟ ಇನ್ನೂ ಮುಂದುವರಿದಿದೆ.

ನಿರ್ಮಾಣ ಹಂತದ ಈ ಕಟ್ಟಡದ ಮುಂದಿನ ಆಟದ ಮೈದಾನದಲ್ಲಿ ಆಟ ಆಡುತ್ತಿದ್ದ ಮಕ್ಕಳಿಬ್ಬರು ಚೆಂಡು ಕಟ್ಟಡದೊಳಕ್ಕೆ ಹೋಗಿದ್ದರಿಂದ ಅದನ್ನು ತರಲು ಹೋಗಿದ್ದರು. ಆಗ ನೀರು ತುಂಬಿದ್ದ ಸಂಪ್​ ಗಮನಕ್ಕೆ ಬರದೆ ಮಗುವೊಂದು ಅದರೊಳಗೆ ಬಿದ್ದು ಮೃತಪಟ್ಟಿದೆ.

ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಸಂಪ್​ನೊಳಗಿದ್ದ ಮಗುವಿನ ಶವ ಹೊರಕ್ಕೆ ತೆಗೆದಿದ್ದಾರೆ. ಆದರೆ ಇನ್ನೊಂದು ಮಗುವಿನ ಸುಳಿವು ಇನ್ನೂ ಸಿಗದ ಕಾರಣ ಹುಡುಕಾಟ ನಡೆಸುತ್ತಿದ್ದಾರೆ. ಕೆ.ಜಿ.ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.