ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಓಣಂ ಅನ್ನು ಸಂಭ್ರಮದಿಂದ ಆಚರಿಸಲಾಯಿತು. ಜನರು ಮನೆ-ಮನೆಗಳಲ್ಲಿ ಹಬ್ಬ ಆಚರಿಸಿ ಸಂಭ್ರಮಿಸಿದರು. ಹೂಗಳಿಂದ ಪೂಕಳಂ ರಚಿಸಿ, ಸಿಹಿತಿಂಡಿ ಮಾಡಿ ವಿತರಿಸಿ, ಸಡಗರಪಟ್ಟರು.
ಬೆಳಗ್ಗೆ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ ಬಳಿಕ ಮಹಿಳೆಯರು ಮಾವೇಲಿಯ ಸ್ವಾಗತಕ್ಕಾಗಿ ವಿವಿಧ ಹೂವುಗಳಿಂದ ಪುಷ್ಪ ರಂಗೋಲಿ ಪೂಕಳಂ ರಚಿಸಿದರು. ಅದರ ನಡುವೆ ದೀಪ ಪ್ರತಿಷ್ಠಾಪನೆ ನಡೆಯಿತು. ಸಿಹಿತಿಂಡಿ ತಯಾರಿಸಿ ದೇವರಿಗೆ ಸಮರ್ಪಿಸಲಾಯಿತು. ಅಕ್ಕಪಕ್ಕದವನ್ನು ಮನೆಗೆ ಆಹ್ವಾನಿಸಿ ವಿಶೇಷ ಉಡುಗೊರೆ ನೀಡಿದರು. ಶಾಂತಿ ಮತ್ತು ಸಮೃದ್ಧಿಯ ಅಭಿವೃದ್ಧಿಗಾಗಿ ಓಣಂ ಸಮಯದಲ್ಲಿ ಮಾವೇಲಿ ಬಂದು ಹರಸುತ್ತಾನೆ ಎಂಬುದು ನಂಬಿಕೆಯಾಗಿದ್ದು, ಈ ಕಾರಣದಿಂದ ಪ್ರತಿ ಮನೆಯಲ್ಲಿ ಪೂಕಳಂ ರಚಿಸಿ ಈ ದಿನ ಮಾವೇಲಿಯನ್ನು ಮನೆಗೆ ಆಮಂತ್ರಿಸಿ ಪೂಜಿಸಲಾಯಿತು.
ಸುಬ್ರಹ್ಮಣ್ಯ ಮಾತ್ರವಲ್ಲದೆ ಸಮೀಪದ ಏನೆಕಲ್, ಬಿಳಿನೆಲೆ, ನೆಟ್ಟಣ, ಹರಿಹರ ಪಲ್ಲತ್ತಡ್ಕ, ಕೊಲ್ಲಮೊಗ್ರ, ಗುತ್ತಿಗಾರು, ಬಳ್ಪ, ಪಂಜ, ಕಲ್ಮಡ್ಕ, ನಿಂತಿಕಲ್, ಎಣ್ಮೂರು, ಅಲೆಕ್ಕಾಡಿ ಮೊದಲಾದ ಪ್ರದೇಶದಲ್ಲಿ ಕೇರಳಿಗರು ಮನೆ-ಮನೆಯಲ್ಲಿ ಓಣಂ ಆಚರಿಸಿದರು.