ಜಿಲ್ಲೆ

ಪರೀಕ್ಷಾ ಅಕ್ರಮಕ್ಕೆ ಡಿವೈಸ್ ಕೊಟ್ಟವರ ಬಂಧನ; ಕೆಪಿಟಿಸಿಎಲ್ ಹಗರಣದಲ್ಲಿ ಬಂಧಿತರ ಸಂಖ್ಯೆ 19ಕ್ಕೆ ಏರಿಕೆ..

ಬೆಳಗಾವಿ: ಸ್ಮಾರ್ಟ್ ವಾಚ್ ಬಳಸಿ ಕೆಪಿಟಿಸಿಎಲ್ ಪರೀಕ್ಷೆ ಬರೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಗೆದಷ್ಟೂ ಅಕ್ರಮ ಹೊರಬರುತ್ತಿದೆ. ಅಕ್ರಮಕ್ಕೆ ಬಳಸಲು ಎಲೆಕ್ಟ್ರಾನಿಕ್ ಡಿವೈಸ್‌ಗಳನ್ನು ಮಾರ್ಪಾಡು ಮಾಡಿ, ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಿದ್ದ ಮೂವರನ್ನು ಬೆಳಗಾವಿ ಜಿಲ್ಲಾ ಪೊಲೀಸರು ಶುಕ್ರವಾರ ಬಂಧಿಸಿದ್ದು, ಬಂಧಿತರ ಸಂಖ್ಯೆ 19ಕ್ಕೆ ಏರಿದೆ.

ಅರಭಾಂವಿಯ ಅಕ್ಷಯ ದುಂದಪ್ಪ ಭಂಡಾರಿ (33), ಬಿರಣಗಡ್ಡಿಯ ಬಸವರಾಜ ರುದ್ರಪ್ಪ ದುಂದನಟ್ಟಿ (34) ಹಾಗೂ ರಾಜಾಪುರದ ಶ್ರೀಧರ ಲಕ್ಕಪ್ಪ ಕಟ್ಟಿಕಾರ ಬಂಧಿತರು. ಪ್ರಕರಣದ ಪ್ರಮುಖ ಆರೋಪಿ ಸಂಜು ಭಂಢಾರಿಗೆ ಅಕ್ಷಯ ಬಂಢಾರಿ ಬೆಂಗಳೂರಿನಿಂದ ಇಲೆಕ್ಟ್ರಾನಿಕ್ ಡಿವೈಸ್‌ಗಳನ್ನು ತಂದು ಮಾರ್ಪಾಡು ಮಾಡಿ ಕೊಟ್ಟಿದ್ದ ಎನ್ನಲಾಗಿದೆ. ಅವುಗಳನ್ನು ಸಂಜು ಭಂಡಾರಿಯಿಂದ ಪಡೆದು ಶ್ರೀಧರ ಕಟ್ಟಿಕಾರ ಅಭ್ಯರ್ಥಿಗಳಿಗೆ ವಿತರಣೆ ಮಾಡಿರುವುದು ಬೆಳಕಿಗೆ ಬಂದಿದೆ. ಇನ್ನು ಬಸವರಾಜ ದುಂದನಟ್ಟಿಯು ಶಿರಹಟ್ಟಿಯಲ್ಲಿ ಅಭ್ಯರ್ಥಿಗಳಿಗೆ ಪ್ರಶ್ನೆಗಳಿಗೆ ಉತ್ತರ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂವರು ಬಂಧಿತರನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದ್ದು, ಬಂಧಿತರಿಂದ ಮೂರು ಮೊಬೈಲ್​ಫೋನ್​, ಒಂದು ದ್ವಿಚಕ್ರವಾಹನ ಹಾಗೂ 50 ಖಾಲಿ ಇಲೆಕ್ಟ್ರಾನಿಕ್ ಡಿವೈಸ್ ಮತ್ತು 18 ಮಾಡಿಫೈ ಮಾಡಿರುವ ಇಲೆಕ್ಟ್ರಾನಿಕ್ ಡಿವೈಸ್‌ಗಳನ್ನು ಜಪ್ತಿ ಮಾಡಲಾಗಿದ್ದು, ತನಿಖೆ ಮುಂದುವರಿದಿದೆ. ಬಂಧಿತರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.