ಬಿ.ರಾಘವೇಂದ್ರ ಪೈ ಗಂಗೊಳ್ಳಿ
ಪ್ರತಿಕೂಲ ಹವಾಮಾನದ ನಡುವೆ ಗಂಗೊಳ್ಳಿಯಲ್ಲಿ ಮಳೆಗಾಲದ ಸಾಂಪ್ರದಾಯಿಕ ಮೀನುಗಾರಿಕೆ ಮತ್ತೆ ಆರಂಭಗೊಂಡಿದ್ದು, ಮೂರ‌್ನಾಲ್ಕು ದಿನಗಳಿಂದ ಉತ್ತಮ ಮೀನುಗಾರಿಕೆ ನಡೆಯುತ್ತಿದೆ.
ಗಂಗೊಳ್ಳಿ ಗ್ರಾಮದ ಲೈಟ್‌ಹೌಸ್ ಸಮೀಪದ ಮಡಿ ಮತ್ತು ಗುಜ್ಜಾಡಿ ಗ್ರಾಮದ ಬೆಣ್ಗೆರೆ ಎಂಬಲ್ಲಿ ನಾಡದೋಣಿ ಮೀನುಗಾರಿಕೆ ಉತ್ತಮವಾಗಿ ನಡೆಯುತ್ತಿದೆ. ಚಟ್ಲಿ, ಬಂಗುಡೆ ಮೊದಲಾದ ಮೀನು ದೊರೆಯುತ್ತಿದ್ದು, ಮೀನುಗಾರರ ಮೊಗದಲ್ಲಿ ಸಂತಸ ಮೂಡಿಸಿದೆ.
ಸಣ್ಣ ಚಟ್ಲಿ (ತೆಮ್ಲಿ) ಕೆಜಿಗೆ 150-200 ರೂ.ಗಳಿದ್ದರೆ, ಚಟ್ಲಿ ಕೆಜಿಗೆ 400-500 ರೂ.ಗಳಿದ್ದು, ಬಂಗುಡೆ ಕೆಜಿಗೆ ಸುಮಾರು 200-300 ರೂ.ಗಳಿಗೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಅನೇಕ ದಿನಗಳಿಂದ ನಾಡದೋಣಿ ಮೀನುಗಾರಿಕೆಗೆ ತೆರಳಲು ಸಿದ್ಧತೆ ನಡೆಸುತ್ತಿದ್ದ ಮೀನುಗಾರರಿಗೆ ಹವಾಮಾನ ವೈಪರಿತ್ಯ ಅಡ್ಡಿಯಾಗಿತ್ತು. ಹೀಗಾಗಿ ಕಳೆದ ನಾಲ್ಕೈದು ದಿನಗಳಿಂದ ಕೆಲವು ದೋಣಿಗಳು ಮಾತ್ರ ಮೀನುಗಾರಿಕೆ ತೆರಳಿದ್ದರೆ, ಶನಿವಾರ ಬಹುತೇಕ ದೋಣಿಗಳು ಕಡಲಿಗಿಳಿದಿವೆ.
ಗಂಗೊಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೀನುಗಾರಿಕೆ ಪ್ರಧಾನ ಉದ್ಯೋಗವಾಗಿರುವುದರಿಂದ ಮೀನುಗಾರರು ನಾಡದೋಣಿ ಮೂಲಕ ಮಳೆಗಾಲದ ದುಡಿಮೆಗೆ ಗಂಗೊಳ್ಳಿ, ಕಂಚುಗೋಡು, ಮರವಂತೆ, ಕೊಡೇರಿ, ಉಪ್ಪುಂದ ಭಾಗದ ಮೀನುಗಾರರು ಸಾಂಪ್ರದಾಯಿಕ ಮೀನುಗಾರಿಕೆಯಲ್ಲಿ ತೊಡಗಿದ್ದಾರೆ. ಮಳೆಗಾಲದಲ್ಲಿ ಆರಂಭಗೊಳ್ಳುವ ಮೀನುಗಾರಿಕೆ ಪ್ರತ್ಯಕ್ಷ, ಪರೋಕ್ಷವಾಗಿ ಸಾವಿರಾರು ಜನರಿಗೆ ಉದ್ಯೋಗ ದೊರಕಿಸಿಕೊಡುತ್ತದೆ.
ಮಳೆಗಾಲದಲ್ಲಿ ಕಡಲು ಬಹಳಷ್ಟು ಪ್ರಕ್ಷುಬ್ಧಗೊಂಡಿರುತ್ತದೆ, ಅಲೆಗಳ ತೀವ್ರತೆ ಅಧಿಕವಾಗಿರುತ್ತದೆ. ಜೀವ ಭಯದಲ್ಲಿಯೇ ಹೊಟ್ಟೆ ಪಾಡಿಗೆ ಮೀನುಗಾರರು ಸವಾಲುಗಳ ನಡುವೆ ಕಡಲಿಗಿಳಿಯುತ್ತಾರೆ. ಮೀನುಗಾರರ ರಕ್ಷಣೆಗೆ ಮೀನುಗಾರರಿಗೆ ಲೈಫ್ ಜಾಕೆಟ್ ನೀಡಬೇಕೆನ್ನುವುದು ಬಹು ವರ್ಷಗಳ ಬೇಡಿಕೆ. ಸರ್ಕಾರ ಇನ್ನೂ ಕೂಡ ಸ್ಪಂದಿಸಿಲ್ಲ ಎಂದು ಮೀನುಗಾರರು ಅಸಮಾಧಾನ ಹೊರಹಾಕಿದ್ದಾರೆ.
ಸಾಂಪ್ರದಾಯಿಕ ಮೀನುಗಾರಿಕೆಯಲ್ಲಿ ತೊಡಗಿದ ಮೀನುಗಾರರು ಗಂಗೊಳ್ಳಿ ಲೈಟ್‌ಹೌಸ್ ಬಳಿ ಮಡಿಯಲ್ಲಿ ಮೀನನ್ನು ತಂದು ವ್ಯಾಪಾರ ಮಾಡುತ್ತಾರೆ. ನೂರಾರು ಸಂಖ್ಯೆಯಲ್ಲಿ ದೋಣಿಗಳು ಮಡಿಯಲ್ಲಿ ಲಂಗರು ಹಾಕುತ್ತವೆ. ಮಳೆಗಾಲದ ಮೀನುಗಾರಿಕೆಗೆ ಲೈಟ್ ಹೌಸ್ ಬಳಿಯಲ್ಲಿರುವ ಮಡಿ ತುಂಬ ಫೇಮಸ್. ಹರಾಜಿನ ಪ್ರಕ್ರಿಯೆ ಮೂಲಕ ವ್ಯಾಪಾರಸ್ಥರು ಮೀನುಗಳನ್ನು ಖರೀದಿಸಿ ರಾಜ್ಯದ ಇತರ ಜಿಲ್ಲೆ, ಅಂತಾರಾಜ್ಯಕ್ಕೂ ಸಾಗಾಟ ಮಾಡುತ್ತಾರೆ. ಹವಾಮಾನ ಅನುಕೂಲಕರವಾಗಿದ್ದರೆ ಸರಿ ಸುಮಾರು ಒಂದು ತಿಂಗಳ ಕಾಲ ಸಾಂಪ್ರದಾಯಿಕ ಮೀನುಗಾರಿಕೆ ನಡೆಯುತ್ತದೆ. ಸ್ಥಳೀಯ ಮಾರುಕಟ್ಟೆಯಲ್ಲಿಯೂ ವ್ಯಾಪಾರ ಚುರುಕುಗೊಳ್ಳುತ್ತದೆ.
ನಾಡದೋಣಿಗಳ ಮೂಲಕ ಹಿಡಿಯುವ ಮೀನುಗಳಿಗೆ ಮಾರುಕಟ್ಟೆಯಲ್ಲಿ ಬಾರಿ ಡಿಮಾಂಡ್ ಇದೆ. ಸಾಂಪ್ರದಾಯಿಕ ಮೀನುಗಾರಿಕೆ ಆರಂಭಗೊಂಡಂತೆ ಮಾರುಕಟ್ಟೆಯಲ್ಲಿ ತಾಜಾ ಮೀನು ಲಗ್ಗೆ ಇಡುತ್ತದೆ. ವೈಟ್ ಚಟ್ಲಿ, ಕೆಂಪು ಚಟ್ಲಿ, ಜಾರಿ, ಬಗುಂಡೆ, ಪಾಪ್ಲೆಟ್, ಬೈಗೀ ಮೀನಿನ ಖರೀದಿಗೆ ಗ್ರಾಹಕರು ಮುಗಿ ಬೀಳುತ್ತಾರೆ.
ಕೆಲವು ದಿನಗಳಿಂದ ನಾಡದೋಣಿ ಮೀನುಗಾರಿಕೆ ನಡೆಯುತ್ತಿದ್ದು, ನಿರೀಕ್ಷಿಸಿದಷ್ಟು ಮೀನು ಸಿಗುತ್ತಿಲ್ಲ. ಆದರೂ ಸಾಧಾರಣ ಮೀನುಗಾರಿಕೆ ನಡೆಯುತ್ತಿದೆ. ಮಳೆಗಾಲದಲ್ಲಿ ನಡೆಯುವ ನಾಡದೋಣಿ ಮೀನುಗಾರಿಕೆಗೆ ಈ ಬಾರಿ ಹೆಚ್ಚಿನ ಅವಕಾಶ ದೊರೆಯದಿರುವುದರಿಂದ ಮೀನುಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಮುಂದಿನ ದಿನಗಳಲ್ಲಿ ಆಶಾದಾಯಕ ಮೀನುಗಾರಿಕೆ ನಡೆಯುವ ವಿಶ್ವಾಸವಿದೆ.-ಸದಾಶಿವ ಖಾರ್ವಿ ಕಂಚುಗೋಡು ಅಧ್ಯಕ್ಷರು, ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘ, ಗಂಗೊಳ್ಳಿ