ಜಿಲ್ಲೆ

ವಾಯುವ್ಯ ಶಿಕ್ಷಕರ ಕ್ಷೇತ್ರದ ಮತ ಎಣಿಕೆ ಕೇಂದ್ರದಲ್ಲಿ ಗೊಂದಲ, ಮತಪೆಟ್ಟಿಗೆ ಬದಲಾವಣೆ?

ಬೆಳಗಾವಿ: ವಿಧಾನ ಪರಿಷತ್ತಿನ ವಾಯುವ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಅಂತಿಮ ಘಟ್ಟ ತಲುಪಿದ್ದು, ಬೆಳಗಾವಿಯ ಜ್ಯೋತಿ ಪಿಯು ಕಾಲೇಜಿನಲ್ಲಿ ಬುಧವಾರ ಬೆಳಗ್ಗೆ 8ಕ್ಕೆ ಮತ ಎಣಿಕೆ ಶುರುವಾಗಿದೆ. ಮತ ಎಣಿಕೆ ಆರಂಭಕ್ಕೂ ಮುನ್ನವೇ ಕೇಂದ್ರದಲ್ಲಿ ಕೆಲಕಾಲ ಗೊಂದಲ ಉಂಟಾಗಿತ್ತು.

ಮತಗಟ್ಟೆ ನಂಬರ್​ 4ರ ಮತಪೆಟ್ಟಿಗೆಯ ಮೇಲೆ ಕಟ್ಟಿದ ಬಟ್ಟೆ ಬದಲಾವಣೆಯಾಗಿತ್ತು. ಪೆಟ್ಟಿಗೆ ಮೇಲೆ ಸೀಲ್ ಹಾಕದಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನ ಲೋನಿ ಪರ ಏಜೆಂಟರು ಆಕ್ಷೇಪ ವ್ಯಕ್ತಪಡಿಸಿದರು. ಜೋರಾಗಿ ಗದ್ದಲ ಶರುವಾಗುತ್ತಿದ್ದಂತೆ ಸ್ಥಳಕ್ಕೆ ಬಂದ ಪ್ರಾದೇಶಿಕ ಆಯುಕ್ತ ಆದಿತ್ಯ ಆಮ್ಲಾನ್ ಬಿಸ್ವಾಸ್, ಸದಲಗಾ- ಚಿಕ್ಕೋಡಿ ಭಾಗದ ಎರಡು ಮತಪೆಟ್ಟಿಗೆ ಮೇಲೆ ಈ ರೀತಿ ಆಗಿದೆ. ಮತದಾನ ಮುಗಿದ ಬಳಿಕ ಇದೇ ಬಟ್ಟೆಯನ್ನೇ ಸುತ್ತಲಾಗಿತ್ತು. ಇದರಲ್ಲಿ ಅನುಮಾನ ಬೇಡ ಎಂದು ಮನವೊಲಿಸಿದರು.

ವಾಯವ್ಯ ಪದವೀಧರ ಕ್ಷೇತ್ರ, ವಾಯವ್ಯ ಶಿಕ್ಷಕರ ಕ್ಷೇತ್ರ ಹಾಗೂ ಪಶ್ಚಿಮ ಶಿಕ್ಷಕರ ಕ್ಷೇತ್ರಗಳಿಗೆ ಜೂ.13ರಂದು ನಡೆದಿದ್ದ ಚುನಾವಣೆಯ ಮತ ಎಣಿಕೆ ಬೆಳಗಾವಿಯ ಜ್ಯೋತಿ ಪಿಯು ಕಾಲೇಜಿನಲ್ಲಿ ಇಂದು ನಡೆಯುತ್ತಿದೆ. ದಕ್ಷಿಣ ಪದವೀಧರರ ಕ್ಷೇತ್ರದ ಮತ ಎಣಿಕೆ ಮೈಸೂರಿನ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ಮ್ಯಾನೇಜ್​ಮೆಂಟ್​ ಕಾಲೇಜಿನಲ್ಲಿ ನಡೆಯುತ್ತಿದೆ.

ಬೆಳಗಾವಿಯಲ್ಲಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರ ಸಮ್ಮುಖದಲ್ಲಿ ಮತ ಎಣಿಕೆ ಕೇಂದ್ರ ಸ್ಟ್ರಾಂಗ್ ರೂಂ ತೆರೆಯಲಾಗಿದೆ.‌ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳಾದ ಬಿಜೆಪಿ ಬಸವರಾಜ ಹೊರಟ್ಟಿ, ಅರುಣ ಶಹಾಪುರ, ಹಣಮಂತ‌ ನಿರಾಣಿ ಹಾಗೂ ಕಾಂಗ್ರೆಸ್​ನ ಪ್ರಕಾಶ ಹುಕ್ಕೇರಿ ಹಣೆಬರಹ ಬಹುತೇಕ ಸಂಜೆ ವೇಳೆಗೆ ನಿರ್ಧಾರವಾಗಲಿದೆ. ಫಲಿತಾಂಶ ಏನಾಗಲಿದೆ ಎಂಬ ಕುತೂಹಲದಿಂದ ಹುಬ್ಬಳ್ಳಿ-ಧಾರವಾಡ, ಬೆಳಗಾವಿ ವಿಜಯಪುರ, ಬಾಗಲಕೋಟೆ ಸೇರಿದಂತೆ ವಿವಿಧ ತಾಲೂಕುಗಳಿಂದ ಬೆಂಬಲಿಗರು ಬೆಳಗಾವಿ ನಗರದ ಜ್ಯೋತಿ ಕಾಲೇಜು ಮುಂಭಾಗ ಜಮಾಯಿಸಿದ್ದಾರೆ.