ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ನೇತೃತ್ವದಲ್ಲಿ ಸುಬ್ರಹ್ಮಣ್ಯದಲ್ಲಿ ಪ್ರಾಕೃತಿಕ ವಿಕೋಪ ಮುಂಜಾಗ್ರತಾ ಸಭೆ ನಡೆಯಿತು. ಎಸಿ ಜುಬಿನ್ ಮೊಹಪಾತ್ರ, ಇಒ ಡಾ.ನಿಂಗಯ್ಯ ಮೊದಲಾದವರು ಉಪಸ್ಥಿತರಿದ್ದರು. 
ಜಿಲ್ಲೆ

ಗ್ರಾಮೀಣಕ್ಕೆ ಪ್ರತ್ಯೇಕ ಯೋಜನೆ: ಪ್ರಕೃತಿ ವಿಕೋಪ ಮುಂಜಾಗ್ರತಾ ಸಭೆಯಲ್ಲಿ ಡಿಸಿ ಹೇಳಿಕೆ

ಸೌಮ್ಯ ಆರ್

ಸುಬ್ರಹ್ಮಣ್ಯ: ಪ್ರಕೃತಿ ವಿಕೋಪಗಳ ಸಂದರ್ಭ ಹೆಚ್ಚಿನ ಅವಾಂತರಗಳಾಗದಂತೆ ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶಕ್ಕೆ ಪ್ರತ್ಯೇಕ ಯೋಜನೆ ರೂಪಿಸಲಾಗುವುದು. ಗ್ರಾಮೀಣ ಪ್ರದೇಶದಲ್ಲಿ ನಿರ್ವಹಣಾ ಹೊಣೆಯನ್ನು ಸ್ಥಳೀಯಾಡಳಿತಕ್ಕೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೈಮುಗಿಲನ್ ಹೇಳಿದರು.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಗುರುವಾರ ಸಂಜೆ ಪುತ್ತೂರು ಉಪ ವಿಭಾಗದ ಸುಳ್ಯ, ಕಡಬ, ಪುತ್ತೂರು, ಬೆಳ್ತಂಗಡಿ ಮೊದಲಾದ ಪ್ರದೇಶಗಳ ಅಧಿಕಾರಿಗಳೊಂದಿಗೆ ನಡೆಸಲಾದ ಪ್ರಾಕೃತಿಕ ವಿಕೋಪ ಮುಂಜಾಗ್ರತಾ ಸಭೆಯಲ್ಲಿ ಅವರು ಮಾತನಾಡಿದರು. ಸ್ಥಳೀಯ ಸಮಸ್ಯೆಗಳಿಗೆ ಸ್ಥಳೀಯವಾಗಿ ಪರಿಹಾರ ನೀಡುವುದು ಯೋಜನೆ ಉದ್ದೇಶ. ಗ್ರಾಪಂ ಸಹಿತ ಇತರ ಕಚೇರಿ ಮತ್ತು ಮಾಧ್ಯಮಗಳಲ್ಲಿ ಶೀಘ್ರದಲ್ಲೇ ಯೋಜನೆಯ ವಿವರ ಪ್ರಕಟಿಸಲಾಗುವುದು ಎಂದರು.

ಹಂತ-ಹಂತದ ವ್ಯವಸ್ಥೆ

ಸ್ಥಳೀಯವಾಗಿ ಜೆಸಿಬಿ, ರೋಪ್‌ಗಳು, ಬೋಟ್, ಸೈಯಿಂಗ್ ಮಷಿನ್‌ಗಳು ಇತ್ಯಾದಿಗಳು ಸಿದ್ಧವಿರುವಂತೆ ವ್ಯವಸ್ಥೆ ಮಾಡಲಾಗುವುದು. ಈ ನಿಟ್ಟಿನಲ್ಲಿ ತಹಸೀಲ್ದಾರ್ ಮತ್ತು ಅಗ್ನಿಶಾಮಕ ದಳಕ್ಕೆ ಜವಾಬ್ದಾರಿ ನೀಡಲಾಗುವುದು. ಸಮಸ್ಯೆ ಬಿಗಡಾಯಿಸಿದಲ್ಲಿ ನಿರ್ವಹಣೆ ಹೊಣೆಯನ್ನು ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್‌ಗಳಿಗೆ ವರ್ಗಾಯಿಸಲಾಗುತ್ತದೆ. ಪ್ರಕೃತಿ ವಿಕೋಪ ಮುಂಜಾಗ್ರತಾ ಕ್ರಮವನ್ನು ಯೋಜನಾಬದ್ಧವಾಗಿ ಅಳವಡಿಸಿಕೊಳ್ಳಲಾಗುವುದು ಎಂದು ಡಿಸಿ ಹೇಳಿದರು.

5 ಲಕ್ಷ ರೂ. ಪರಿಹಾರ

ಪ್ರಾಕೃತಿಕ ವಿಕೋಪ ಪರಿಹಾರವಾಗಿ 24 ಗಂಟೆಯೊಳಗೆ 5 ಲಕ್ಷ ರೂ. ನೀಡಲಾಗುವುದು. ಕಡಬದಲ್ಲಿ ಸಿಡಿಲಿನಿಂದ ಮೃತ ಪಟ್ಟವರು ಉತ್ತರ ಪ್ರದೇಶ ನಿವಾಸಿಯಾದ ಕಾರಣ ಅವರ ವಾರಸುದಾರರ ಮಾಹಿತಿ ಕಲೆಹಾಕಿ ಆ ಮೊತ್ತ ನೀಡಲಾಗುವುದು. ಈ ಬಗ್ಗೆ ಈಗಾಗಲೇ ಅಲ್ಲಿನ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ ಎಂದರು.

ಸಿಡಿಲು ಮುನ್ನೆಚ್ಚರಿಕೆಗೆ ಆ್ಯಪ್

ಡಿಸಾಸ್ಟರ್ಸ್ ಮ್ಯಾನೇಜ್‌ಮೆಂಟ್‌ನಿಂದ ಸಿಡಿಲಿನ ಬಗ್ಗೆ ಆ್ಯಪ್ ರಚಿಸಲಾಗಿದೆ. ಇದನ್ನು ಡೌನ್‌ಲೋಡ್ ಮಾಡಿಕೊಂಡರೆ ಸಿಡಿಲು ಬರುವ ತಾಣದ ಬಗ್ಗೆ ಮೊದಲೇ ತಿಳಿದುಕೊಳ್ಳಲು ಸಾಧ್ಯ. ಸಿಡಿಲು ಬರುವ ಸಂದರ್ಭ ಆದಷ್ಟು ಮನೆಯ ಒಳಗೆ ಇದ್ದು, ವಿದ್ಯುತ್ ಉಪಕರಣಗಳ ಉಪಯೋಗ ಮಾಡದಂತೆ, ಮರಗಳ ಅಡಿಯಲ್ಲಿ ನಿಲ್ಲದಂತೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಈ ಭಾಗದಲ್ಲಿ ಲೈಟ್ನಿಂಗ್ ಅರೆಸ್ಟ್ ರಚಿಸುವ ಬಗ್ಗೆ ಚಿಂತನೆ ಮಾಡಲಾಗುತ್ತಿದೆ ಎಂದು ಡಿಸಿ ಹೇಳಿದರು.

ಪುತ್ತೂರು ಉಪವಿಭಾಗ ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಸುಳ್ಯ ತಹಸೀಲ್ದಾರ್ ಮಂಜುನಾಥ ಜಿ, ಕಡಬ ತಹಸೀಲ್ದಾರ್ ಪ್ರಭಾಕರ ಕಜೂರೆ, ಪುತ್ತೂರು ತಹಸೀಲ್ದಾರ್ ಕುಂಞಿ ಅಹ್ಮದ್, ಬೆಳ್ತಂಗಡಿ ತಹಸೀಲ್ದಾರ್ ಪೃಥ್ವಿ ಸಾನಿಕಮ್, ಕಡಬ ಕಂದಾಯ ನಿರೀಕ್ಷಕ ಪೃಥ್ವಿಕುಮಾರ್, ಪಂಜ ಕಂದಾಯ ನಿರೀಕ್ಷಕ ರಂಜನ್ ಕಲ್ಕುದಿ, ಕಡಬ ಉಪ ತಹಸೀಲ್ದಾರ್ ಮನೋಹರ್ ಕೆ.ಟಿ, ಸುಳ್ಯ ನ.ಪಂ. ಮುಖ್ಯಾಧಿಕಾರಿ ಬಿ.ಎಂ.ಡಾಂಗೆ, ಸುಬ್ರಹ್ಮಣ್ಯ ಗ್ರಾ.ಪಂ. ಕಾರ್ಯದರ್ಶಿ ಮೋನಪ್ಪ.ಡಿ ಮೊದಲಾದವರಿದ್ದರು.