More

    ಕರಾವಳಿಗರ ಕೈ ತಪ್ಪಿದ ಪರಿಷತ್ ಟಿಕೆಟ್


    *ಪಿ.ಬಿ.ಹರೀಶ್ ರೈ

    ಮಂಗಳೂರು : ವಿಧಾನ ಪರಿಷತ್‌ನ ನೈಋತ್ಯ ಶಿಕ್ಷಕರ ಕ್ಷೇತ್ರ ಮತ್ತು ಪದವೀಧರ ಕ್ಷೇತ್ರದ ಚುನಾವಣೆಯ ಅಭ್ಯರ್ಥಿ ಆಯ್ಕೆಯಲ್ಲಿ ದ.ಕ.ಮತ್ತು ಉಡುಪಿ ಜಿಲ್ಲೆಯನ್ನು ಕಡೆಗಣಿಸಲಾಗಿದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಈ ಬಾರಿ ಕರಾವಳಿಯ
    ನಾಯಕರಿಗೆ ಪ್ರಾತಿನಿಧ್ಯ ನೀಡಿಲ್ಲ. ಬಿಜೆಪಿ-ಜೆಡಿಎಸ್ ಮೈತ್ರಿ ಪರಿಣಾಮ ಇದೇ ಮೊದಲ ಬಾರಿಗೆ ಬಿಜೆಪಿ ಸ್ಪರ್ಧೆಯಿಂದ ಹಿಂದೆ ಸರಿದಿದೆ.
    ನೈಋತ್ಯ ಪದವೀಧರ ಕ್ಷೇತ್ರದಲ್ಲಿ ಸುಳ್ಯದ ಸ್ವಯಂ ಪ್ರಕಾಶ್ ಭಟ್ ಅವರು ಈ ಹಿಂದೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು. ಆ ಬಳಿಕ ಕರಾವಳಿಯ ಕಾಂಗ್ರೆಸ್ ನಾಯಕರು ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ ಉದಾಹರಣೆ ಇಲ್ಲ. ಆದರೆ ಈ ಎರಡು ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದ್ದ ಕಾರಣ, ಕರಾವಳಿಯ ಬಿಜೆಪಿ ನಾಯಕರಿಗೆ ಪ್ರತಿ ಬಾರಿ ಸ್ಪರ್ಧೆಗೆ ಅವಕಾಶ ದೊರೆಯುತ್ತಿತ್ತು.
    * ಕ್ಷೇತ್ರದ ಸ್ವರೂಪ
    1988ರಲ್ಲಿ ದ.ಕ., ಉಡುಪಿ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಮತ್ತು ಚನ್ನಗಿರಿ ತಾಲೂಕುಗಳ ವ್ಯಾಪ್ತಿಗೆ ಸೀಮಿತವಾದ ನೈಋತ್ಯ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರ ರಚನೆಯಾಗಿತ್ತು. ಶಿಕ್ಷಕರ ಕ್ಷೇತ್ರಕ್ಕೆ 1988ರಲ್ಲಿ ನಡೆದ ಪ್ರಥಮ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಮಂಗಳೂರಿನ ಫೆಲಿಕ್ಸ್ ರಾಡ್ರಿಗಸ್ ಗೆದ್ದಿದ್ದರು. ಜನತಾ ದಳ ಮತ್ತು ಹೈಸ್ಕೂಲ್ ಶಿಕ್ಷಕರ ಸಂಘ ಅವರನ್ನು ಬೆಂಬಲಿಸಿತ್ತು. ಪದವೀಧರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಶಿವಮೊಗ್ಗದ ಡಿ.ಎಚ್.ಶಂಕರಮೂರ್ತಿ ಜಯ ಸಾಧಿಸಿದ್ದರು.
    * ಬಿಜೆಪಿ ಸತತ ಜಯ
    ಆ ಬಳಿಕ ನೈಋತ್ಯ ಪದವೀಧರ ಕ್ಷೇತ್ರವನ್ನು ಡಿ.ಎಚ್.ಶಂಕರಮೂರ್ತಿ ಸತತ 4 ಬಾರಿ ಪ್ರತಿನಿಧಿಸಿದರೆ, ಶಿಕ್ಷಕರ ಕ್ಷೇತ್ರವನ್ನು ದಕ್ಷಿಣ ಕನ್ನಡ ಜಿಲ್ಲೆಯ ನಾಯಕರಿಗೆ ಸತತ 4 ಬಾರಿ ಪ್ರತಿನಿಧಿಸುವ ಅವಕಾಶ ದೊರೆಯಿತು. 1994 ಮತ್ತು 2000 ಚುನಾವಣೆಯಲ್ಲಿ ಬಿಜೆಪಿಯ ಕೆ.ಬಾಲಕೃಷ್ಣ ಭಟ್ ಹಾಗೂ 2006 ಮತ್ತು 2012ರ ಚುನಾವಣೆಯಲ್ಲಿ ಬಿಜೆಪಿಯ ಕ್ಯಾ.ಗಣೇಶ್ ಕಾರ್ಣಿಕ್ ಜಯಭೇರಿ ಬಾರಿಸಿದ್ದರು
    ಆದರೆ 2018ರ ಚುನಾವಣೆಯಲ್ಲಿ ಕ್ಷೇತ್ರ ಬಿಜೆಪಿಯ ಕೈ ತಪ್ಪಿತು. ಕಾರ್ಣಿಕ್ ವಿರುದ್ಧ ಜೆಡಿಎಸ್‌ನ ಎಸ್.ಎಲ್.ಭೋಜೇ ಗೌಡ ಜಯ ಸಾಧಿಸಿದರು. ಈ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಎಸ್.ಎಲ್.ಭೋಜೇ ಗೌಡ ಅವರು ಅವಕಾಶ ಪಡೆದಿದ್ದಾರೆ.
    * ಆಕಾಂಕ್ಷಿಗಳಿಗೆ ನಿರಾಸೆ
    ನೈಋತ್ಯ ಪದವೀಧರ ಕ್ಷೇತ್ರದಿಂದ ಉಡುಪಿಯ ಮಾಜಿ ಶಾಸಕ ರಘುಪತಿ ಭಟ್, ವಿಕಾಸ್ ಪುತ್ತೂರು ಹಾಗೂ ಶಿಕ್ಷಕರ ಕ್ಷೇತ್ರದಿಂದ ಹರೀಶ್ ಆಚಾರ್ಯ ಆಕಾಂಕ್ಷಿಗಳಾಗಿದ್ದರು. ಮತದಾರರ ನೋಂದಣಿ ಪ್ರಕ್ರಿಯೆಯಲ್ಲಿ ಇವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಆದರೆ ಮೈತ್ರಿಯಿಂದಾಗಿ ಆಕಾಂಕ್ಷಿಗಳು ನಿರಾಸೆ ಹೊಂದುವಂತಾಗಿದೆ.
    * ಕರಾವಳಿಯ ಪ್ರಾತಿನಿಧ್ಯ
    ವಿಧಾನ ಪರಿಷತ್‌ನಲ್ಲಿ ಈಗ ಕರಾವಳಿಯ ಐವರು ಸದಸ್ಯರಿದ್ದಾರೆ. ಕಾಂಗ್ರೆಸ್‌ನ ಹರೀಶ್ ಕುಮಾರ್ ಮತ್ತು ಜೆಡಿಎಸ್‌ನ ಬಿ.ಎಂ.ಫಾರೂಕ್ ಅವರ ಸದಸ್ಯತ್ವದ ಅವಧಿ 2024ರ ಜೂನ್ ತಿಂಗಳಿಗೆ ಅಂತ್ಯವಾಗಲಿದೆ. ಬಿಜೆಪಿಯ ಪ್ರತಾಪ್‌ಸಿಂಹ ನಾಯಕ್ ಅವರ ಅವಧಿ 2026ರ ಜೂನ್ ತಿಂಗಳಿಗೆ ಪೂರ್ಣವಾಗಲಿದೆ. ಈ ಮೂವರು ವಿಧಾನಸಭಾ ಸದಸ್ಯರಿಂದ ಪರಿಷತ್ಗ್ ಚುನಾಯಿತರಾಗಿದ್ದಾರೆ.
    ಸ್ಥಳೀಯಾಡಳಿತ ಸಂಸ್ಥೆಗಳಿಂದ ಚುನಾಯಿತರಾದ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕಾಂಗ್ರೆಸ್‌ನ ಮಂಜುನಾಥ ಭಂಡಾರಿ ಅವರ ಅವಧಿ 2028ರ ಜನವರಿ ತನಕ ಇದೆ. ಕೋಟ ಅವರು ಲೋಕಸಭೆ ಚುನಾವಣೆಯಲ್ಲಿ ಜಯ ಸಾಧಿಸಿದರೆ, ಪರಿಷತ್ ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿದೆ.

    * ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಹಿತದೃಷ್ಟಿಯಿಂದ ಬಿಜೆಪಿ-ಜೆಡಿಎಸ್ ಜತೆ ಮೈತ್ರಿಯಾಗಿದೆ. ಈಗ ಪರಿಷತ್ ಚುನಾವಣೆಯಲ್ಲೂ ಮೈತ್ರಿ ಮುಂದುವರಿಸಲು ಪಕ್ಷದ ವರಿಷ್ಠರು ತೀರ್ಮಾನಿಸಿದ್ದಾರೆ. ಪಕ್ಷದ ತೀರ್ಮಾನವನ್ನು ಗೌರವಿಸುವುದು ಎಲ್ಲ ಕಾರ್ಯಕರ್ತರ ಕರ್ತವ್ಯ.
    -ಕ್ಯಾ.ಗಣೇಶ್ ಕಾರ್ಣಿಕ್, ಮಾಜಿ ಎಂಎಲ್‌ಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts