ಜಿಲ್ಲೆ

ಯುವಕರಿಂದ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಪ್ರಯತ್ನ : ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಸಂಪತ್‌ಕುಮಾರ್ ಹೇಳಿಕೆ

ಸೌಮ್ಯ ಆರ್

ಮೂಡುಬಿದಿರೆ: ವಿವೇಕಾನಂದರು ತಮ್ಮ ಜೀವನದ ಮೂಲಕ ಯುವಕರಿಗೆ ಮಿತಿಯೊಳಗೆ ಹೊಸ ಹೋರಾಟದ ತತ್ವಗಳನ್ನು ಮತ್ತು ಸಮಾಜದ ಮೇಲೆ ಬಲ ತರುವ ಮಾರ್ಗಗಳನ್ನು ತೋರಿಸಿದರು. ಯುವಕರು ಸ್ವಾಮಿ ವಿವೇಕಾನಂದರ ಚಿಂತನೆ ಮೈಗೂಡಿಸಿಕೊಂಡು ಬಲಿಷ್ಠ ರಾಷ್ಟ್ರ ನಿರ್ಮಿಸಲು ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಸಂಪತ್‌ಕುಮಾರ್ ಹೇಳಿದರು.

ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂಸ್ಥೆ ಕಾರ್ಯದರ್ಶಿ ರಶ್ಮಿತಾ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವಕರು ದೇಶ ಕಟ್ಟುವ ಕೆಲಸದಲ್ಲಿ ತೊಡಗಿಕೊಳ್ಳಬೇಕು. ಸಮಾಜಕ್ಕೆ ಎಷ್ಟು ಸಾಧ್ಯವೋ ಅಷ್ಟು ಒಳ್ಳೆಯ ಕೆಲಸವನ್ನು ಮಾಡಬೇಕು. ವಿವೇಕಾನಂದರು ದೇಶ ಕಂಡ ಮಹಾನ್ ವ್ಯಕ್ತಿ. ಅವರ ಚಿಂತನೆಗಳು ಸಮಾಜಕ್ಕೆ ಮಾರ್ಗದರ್ಶಿ ಎಂದರು.

ಸಹ ಮುಖ್ಯಶಿಕ್ಷಕ ಜಯಶೀಲ ಉಪಸ್ಥಿತರಿದ್ದರು. ಎಕ್ಸಲೆಂಟ್ ಪಿಯು ಕಾಲೇಜಿನ ವಿದ್ಯಾರ್ಥಿ ಓಂ ಯುವ ದಿನದ ಮಹತ್ವವನ್ನು ವಾಚಿಸಿದರು. ಶಿಕ್ಷಕಿ ಜಯಲಕ್ಷ್ಮೀ ನಿರೂಪಿಸಿದರು. ವಿದ್ಯಾರ್ಥಿಗಳು ವಿವೇಕಾನಂದರ ಜೀವನ ಕುರಿತಾದ ರೂಪಕವನ್ನು ಪ್ರದರ್ಶಿಸಿದರು.