ಉಡುಪಿ: ಮೊನ್ನೆಮೊನ್ನೆಯಷ್ಟೇ ಉಡುಪಿ ಜಿಲ್ಲೆ ಕುಂದಾಪುರ ಸಮೀಪದ ಕೋಟದ ಕೊರಗರ ಮನೆಯಲ್ಲಿ ಮೆಹೆಂದಿ ಸಂದರ್ಭದಲ್ಲಿ ನಡೆದ ಅವಾಂತರ ವಿಚಾರ ಇದೀಗ ರಾಷ್ಟ್ರ ರಾಜಧಾನಿ ದೆಹಲಿಗೂ ತಲುಪಿದೆ. ಮಾತ್ರವಲ್ಲ, ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರ ನೀಡುವಂತೆ ಉಡುಪಿ ಎಸ್ಪಿಗೆ ದೆಹಲಿಯಿಂದ ಪತ್ರ ಕೂಡ ರವಾನೆಯಾಗಿದೆ.
ಸೋಮವಾರ ರಾತ್ರಿ ಕೋಟತಟ್ಟು ಗ್ರಾಮದಲ್ಲಿ ಕೊರಗ ಸಮುದಾಯದ ಮನೆಯಲ್ಲಿ ನಡೆದ ಮೆಹೆಂದಿ ಕಾರ್ಯಕ್ರಮದಲ್ಲಿ ಅವಧಿ ಮೀರಿ ಡಿಜೆ ಹಾಕಿದ್ದಾರೆ ಎಂಬ ದೂರಿನ ಅನ್ವಯ ತೆರಳಿದ್ದ ಪಿಎಸ್‌ಐ ಬಿ.ಪಿ. ಸಂತೋಷ್, ಮದುಮಗ ಸಹಿತ ಮನೆಯವರ ಮೇಲೆ ಲಾಠಿ ಪ್ರಹಾರ ನಡೆಸಿದ್ದರಿಂದ ಹಲವರು ಗಾಯಗೊಂಡಿದ್ದರು. ಈ ಬಗ್ಗೆ ರಾಜ್ಯದಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿತ್ತು.
ಇದನ್ನೂ ಓದಿ: ಗಂಡ-ಹೆಂಡತಿ ಜಗಳದ ದುರ್ಲಾಭ ಪಡೆಯಲು ಯತ್ನಿಸಿದ ಪೊಲೀಸ್; ಇನ್ಸ್ಪೆಕ್ಟರ್-ಎಎಸ್ಐ ವಿರುದ್ಧ ದಾಖಲಾಯಿತು ಎಫ್ಐಆರ್
ಈ ಸಂಬಂಧ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್ ಅವರು ತನಿಖೆಗೆ ಆದೇಶ ನೀಡಿದ್ದರು. ಬಳಿಕ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಅವರು ಎಸ್ಐ ಸಂತೋಷ್ ಅವರನ್ನು ಅಮಾನತುಗೊಳಿಸಿದ್ದಲ್ಲದೆ, ಐವರು ಪೊಲೀಸ್ ಸಿಬ್ಬಂದಿಯನ್ನು ವರ್ಗಾವಣೆ ಮಾಡಿದ್ದರು.
ಇದನ್ನೂ ಓದಿ: 25 ಸಾವಿರಕ್ಕೂ ಅಧಿಕ ಮಾತ್ರೆ ತಿಂದಿದ್ದರೂ ಪ್ರಯೋಜನವಾಗಿಲ್ಲ ಎಂದು ಗುಂಡು ಹೊಡೆದುಕೊಂಡು ಬಿಇಒ ಆತ್ಮಹತ್ಯೆ!
ಈ ಪ್ರಕರಣ ಇದೀಗ ರಾಷ್ಟ್ರೀಯ ಮಹಿಳಾ ಆಯೋಗದ ಗಮನ ಸೆಳೆದಿದ್ದು, ಆಯೋಗವು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ವಿವರಣೆ ಕೇಳಿದೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶಾಮಲಾ ಕುಂದರ್, ಕೊರಗರ ಮೇಲಿನ ಪೊಲೀಸ್ ದೌರ್ಜನ್ಯ ಪೊಲೀಸರ ಮೇಲಿನ ವಿಶ್ವಾಸವನ್ನೇ ಕಳೆದುಕೊಳ್ಳುವಂತೆ ಮಾಡುತ್ತದೆ. ಜನಸಾಮಾನ್ಯರನ್ನು ರಕ್ಷಿಸಬೇಕಾದ ಪೊಲೀಸರೇ ಈ ರೀತಿ ವರ್ತಿಸಿರುವುದು ಸಮಾಜಕ್ಕೆ ತಪ್ಪು ಸಂದೇಶ ನೀಡಿದಂತೆ. ಈ ಸಂಬಂಧ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದು ವಿವರಣೆ ಕೇಳಿದ್ದೇವೆ. ಮುಂದಿನ ದಿನಗಳಲ್ಲಿ ಪರಿಶೀಲನೆ ನಡೆಸಿ ನಂತರದ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ.