ಮೈಸೂರು ದಸರಾಕ್ಕೆ 146 ಕಿ.ಮೀ. ದೀಪಾಲಂಕಾರ ಎಂದ ಇಂಧನ ಸಚಿವ ಕೆ.ಜೆ. ಜಾರ್ಜ್ 
ಮೈಸೂರು

ಮೈಸೂರು ದಸರಾಕ್ಕೆ 146 ಕಿ.ಮೀ. ದೀಪಾಲಂಕಾರ; 3,500 ಡ್ರೋನ್‌ಗಳ ಪ್ರದರ್ಶನ: ಇಂಧನ ಸಚಿವ ಕೆ.ಜೆ. ಜಾರ್ಜ್! Mysuru Dasara 2026

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ವತಿಯಿಂದ ನಗರದ 199 ರಸ್ತೆಗಳು, 123 ವೃತ್ತಗಳು ಹಾಗೂ 80 ವಿವಿಧ ಪ್ರತಿಕೃತಿಗಳಿಗೆ ವಿಶೇಷ ವಿನ್ಯಾಸದ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತಿದೆ. ದೀಪಾಲಂಕಾರ ವ್ಯವಸ್ಥೆ ಅಕ್ಟೋಬರ್ 11ರಿಂದ ಅಕ್ಟೋಬರ್ 31ರವರೆಗೆ ಒಟ್ಟು 21 ದಿನಗಳ ಕಾಲ ಕಾರ್ಯನಿರ್ವಹಿಸಲಿದೆ.

* 199 ರಸ್ತೆಗಳು, 123 ವೃತ್ತಗಳು ಹಾಗೂ 80 ಪ್ರತಿಕೃತಿಗಳಿಗೆ ಆಕರ್ಷಕ ವಿದ್ಯುತ್ ದೀಪಾಲಂಕಾರ

* ಅಕ್ಟೋಬರ್ 11ರಿಂದ 31ರವರೆಗೆ 21 ದಿನಗಳ ಕಾಲ ದೀಪಾಲಂಕಾರ

* 3,500 ಡ್ರೋನ್‌ಗಳೊಂದಿಗೆ ನಾಲ್ಕು ದಿನ ವಿಶೇಷ ಪ್ರದರ್ಶನ; ರಾಷ್ಟ್ರಪಕ್ಷಿ ನವಿಲಿನ ಆಕೃತಿ ಮೂಲಕ ಗಿನ್ನಿಸ್ ದಾಖಲೆಗೆ ಪ್ರಯತ್ನ

ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ-2026ರ ( Mysuru Dasara 2026 ) ಅಂಗವಾಗಿ ಈ ಬಾರಿ ಮೈಸೂರು ನಗರವನ್ನು ಇನ್ನಷ್ಟು ಆಕರ್ಷಕವಾಗಿ ಕಂಗೊಳಿಸಲು ಒಟ್ಟು 146 ಕಿ.ಮೀ. ರಸ್ತೆ ವ್ಯಾಪ್ತಿಯಲ್ಲಿ ಭವ್ಯ ವಿದ್ಯುತ್ ದೀಪಾಲಂಕಾರ ಕೈಗೊಳ್ಳಲಾಗುತ್ತಿದೆ ಎಂದು ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ವತಿಯಿಂದ ನಗರದ 199 ರಸ್ತೆಗಳು, 123 ವೃತ್ತಗಳು ಹಾಗೂ 80 ವಿವಿಧ ಪ್ರತಿಕೃತಿಗಳಿಗೆ ವಿಶೇಷ ವಿನ್ಯಾಸದ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತಿದೆ. ದೀಪಾಲಂಕಾರ ವ್ಯವಸ್ಥೆ ಅಕ್ಟೋಬರ್ 11ರಿಂದ ಅಕ್ಟೋಬರ್ 31ರವರೆಗೆ ಒಟ್ಟು 21 ದಿನಗಳ ಕಾಲ ಕಾರ್ಯನಿರ್ವಹಿಸಲಿದೆ.

ಈ ಬಾರಿ ದಸರಾ ದೀಪಾಲಂಕಾರದ ಜೊತೆಗೆ 3,500 ಎಲ್‌ಇಡಿ ಡ್ರೋನ್‌ಗಳನ್ನು ಬಳಸಿ ನಾಲ್ಕು ದಿನ ವಿಶೇಷ ಡ್ರೋನ್ ಪ್ರದರ್ಶನ ಆಯೋಜಿಸಲು ಯೋಜಿಸಲಾಗಿದೆ. ಅಕ್ಟೋಬರ್ 17, 18, 20 ಮತ್ತು 21ರಂದು ರಾತ್ರಿ 8 ಗಂಟೆಗೆ ಡ್ರೋನ್ ಪ್ರದರ್ಶನ ನಡೆಯಲಿದೆ.

3,500 ಡ್ರೋನ್‌ಗಳನ್ನು ಏಕಕಾಲದಲ್ಲಿ ಬಳಸಿಕೊಂಡು ರಾಷ್ಟ್ರಪಕ್ಷಿ ನವಿಲಿನ ಬೃಹತ್ ಆಕೃತಿಯನ್ನು ಆಕಾಶದಲ್ಲಿ ಮೂಡಿಸಿ ಗಿನ್ನಿಸ್ ದಾಖಲೆಗೆ ಪ್ರಯತ್ನಿಸುವ ಯೋಜನೆಯೂ ಈ ಬಾರಿಯ ಪ್ರಮುಖ ಆಕರ್ಷಣೆಯಾಗಲಿದೆ.

“ಮೈಸೂರು ದಸರಾ ಕೇವಲ ಸಾಂಸ್ಕೃತಿಕ ಉತ್ಸವವಲ್ಲ; ಕರ್ನಾಟಕದ ಪರಂಪರೆ ಮತ್ತು ಪ್ರವಾಸೋದ್ಯಮವನ್ನು ದೇಶ-ವಿದೇಶಕ್ಕೆ ಪರಿಚಯಿಸುವ ದೊಡ್ಡ ವೇದಿಕೆಯಾಗಿದೆ. ಈ ಬಾರಿ ದೀಪಾಲಂಕಾರವನ್ನು ಮತ್ತಷ್ಟು ವಿಶಾಲ ಮತ್ತು ಆಕರ್ಷಕವಾಗಿ ರೂಪಿಸಲಾಗುತ್ತಿದೆ. ನಗರದ ಪ್ರಮುಖ ರಸ್ತೆಗಳು, ವೃತ್ತಗಳು ಮತ್ತು ಪ್ರತಿಕೃತಿಗಳೊಂದಿಗೆ ಡ್ರೋನ್ ಪ್ರದರ್ಶನವೂ ಪ್ರವಾಸಿಗರಿಗೆ ವಿಭಿನ್ನ ಅನುಭವ ನೀಡಲಿದೆ,” ಎಂದು ಸಚಿವ ಕೆ.ಜೆ. ಜಾರ್ಜ್ ಹೇಳಿದರು.

“ದಸರಾಕ್ಕೆ ಬರುವ ಪ್ರವಾಸಿಗರು ಹಗಲಿನ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ರಾತ್ರಿ ವೇಳೆ ಮೈಸೂರಿನ ದೀಪಾಲಂಕಾರದ ವೈಭವವನ್ನೂ ಅನುಭವಿಸಬೇಕು. ಸುರಕ್ಷತೆ, ವಿದ್ಯುತ್ ಪೂರೈಕೆ ಮತ್ತು ವ್ಯವಸ್ಥಿತ ನಿರ್ವಹಣೆಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ,” ಎಂದು ಅವರು ತಿಳಿಸಿದರು.

ದಸರಾ ದೀಪಾಲಂಕಾರಕ್ಕಾಗಿ ತಾತ್ಕಾಲಿಕವಾಗಿ 3,106 ಕೆವಿಎ ವಿದ್ಯುತ್ ಭಾರ ವ್ಯವಸ್ಥೆ ಮಾಡಲಾಗಿದ್ದು, ಒಟ್ಟು 2,60,920 ಯೂನಿಟ್ ವಿದ್ಯುತ್ ಬಳಕೆ ಅಂದಾಜಿಸಲಾಗಿದೆ. ದೀಪಾಲಂಕಾರ ಕಾಮಗಾರಿಗೆ 250 ಲಕ್ಷ ರೂ. ಅಂದಾಜು ವೆಚ್ಚ ನಿಗದಿಪಡಿಸಲಾಗಿದೆ.