ಜಿಲ್ಲೆ

ವೀಲಿಂಗ್​ ಮಾಡುತ್ತ ಸ್ಕೂಟರ್​ಗೆ ಡಿಕ್ಕಿ ಹೊಡೆದ ಪುಂಡರು; ಶಿಕ್ಷಕಿ ಸ್ಥಿತಿ ಗಂಭೀರ

Webdesk - Manjunatha B

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಿನದಿಂದ ದಿನಕ್ಕೆ ಪುಂಡರ ಹಾವಳಿ ಹೆಚ್ಚುತ್ತಿದ್ದು, ವಿವಿಧ ರಸ್ತೆಗಳಲ್ಲಿ ವೀಲಿಂಗ್ ಮಾಡುವ ಮೂಲಕ ಅಟ್ಟಹಾಸ ಮೆರೆಯುತ್ತಿದ್ದಾರೆ.

ಇದೀಗ ಘಟನೆಯೊಂದರಲ್ಲಿ ಪುಂಡರು ವೀಲಿಂಗ್​ ಮಾಡುತ್ತ ಶಿಕ್ಷಕಿಯೊಬ್ಬರ ಸ್ಕೂಟರ್​ಗೆ ಡಿಕ್ಕಿ ಹೊಡೆದಿದ್ದು, ಗಾಯಾಳು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಸಿದ್ದಾರ್ಥನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೈಕ್​ ವಶಕ್ಕೆ ಪಡೆಯಲಾಗಿದೆ.

ಜುಲೈ 18ರಂದು ಶಿಕ್ಷಕಿ ಎಂದಿನಂತೆ ಕೆಲಸ ಮುಗಿಸಿ ಮನೆಗೆ ವಾಪಸ್​ ತೆರಳುತ್ತಿದ್ದ ವೇಳೆ ಗಾಯತ್ರಿಪುರಂ ಚರ್ಚ್​ ಬಳಿ ಕೆಟಿಎಂ ಬೈಕ್​ನಲ್ಲಿ ತ್ರಿಬಲ್​ ರೈಡಿಂಗ್​ ಮೂಲಕ ವೀಲಿಂಗ್ ಮಾಡುತ್ತಾ ಬಂದ ಪುಂಡರು ಎದುರು ಬದಿಯಲ್ಲಿ ಬರುತ್ತಿದ್ದ ಸ್ಕೂಟರ್​ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾರೆ.

ಡಿಕ್ಕಿ ಹೊಡೆದ ಪರಿಣಾಮ ತಲೆಗೆ ಗಾಯವಾಗಿ ರಕ್ತಸ್ರಾವವಾಗಿ ಪ್ರಜ್ಞೆ ತಪ್ಪಿದ್ದ ಶಿಕ್ಷಕಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ತೀವ್ರನಿಗಾ ಘಟಕದಲ್ಲಿ ಶಿಕ್ಷಕಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.