ಜಿಲ್ಲೆ

Mysore Dasara 2024| ಸಾಂಸ್ಕೃತಿಕ ನಗರಿಯಲ್ಲಿ ಕಳೆಗಟ್ಟಿದ ಸಂಭ್ರಮ, ಕಾರ್ಯಕ್ರಮಗಳ ವಿವರ ಹೀಗಿದೆ

Webdesk - Manjunatha B

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾಗೆ (Mysore Dasara) ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗಿದ್ದು, ಬೆಳಿಗ್ಗೆ 9.15ರಿಂದ 9.45ರೊಳಗೆ ಸಲ್ಲುವ ಶುಭಲಗ್ನದಲ್ಲಿ ನಾಡದೇವತೆ ಚಾಮುಂಡೇಶ್ವರಿ ದೇವಿಯ ಅಗ್ರ ಪೂಜೆಯೊಂದಿಗೆ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಈ ಬಾರಿ ದಸರಾವನ್ನು ಪ್ರೊ.ಹಂ.‍ಪ. ನಾಗರಾಜಯ್ಯ ಉದ್ಘಾಟಿಸಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜ್ಯ ಸರ್ಕಾರದ ಸಚಿವರು, ಶಾಸಕರು ಹಾಗೂ ಸಂಸದರು ಭಾಗಿಯಾಗಲಿದ್ದಾರೆ.

ಚಾಮುಂಡಿ ಬೆಟ್ಟದಲ್ಲಿ ಉದ್ಘಾಟನೆ ಬಳಿಕ ನಗರದ ವಿವಿಧ ವೇದಿಕೆಗಳಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದ್ದು, ಜನರಿಗೆ ಭರ್ಜರಿ ಮನರಂಜನೆ ಎಂದರೆ ತಪ್ಪಾಗಲಾರದು. ಮೊದಲ ದಿನ 12ಕ್ಕೂ ಅಧಿಕ ಕಾರ್ಯಕ್ರಮಗಳು ಉದ್ಘಾಟನೆಗೊಳ್ಳಲಿದ್ದು, ನವರಾತ್ರಿಯ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು, ಸಾರ್ವಜನಿಕರು ಉತ್ಸುಕರಾಗಿದ್ಧಾರೆ.

ನಾಡಹಬ್ಬ ದಸರಾ ಪ್ರಯುಕ್ತ ಅಕ್ಟೋಬರ್​ 03ರಿಂದ 12ರವರೆಗೂ ನಗರದ ನಾನಾ ಭಾಗಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ದಸರಾದ ಮೊದಲ ದಿನ ಕಾರ್ಯಕ್ರಮಗಳಿಗೆ ವಿದ್ಯುಕ್ತ್​​ ಚಾಲನೆ ಸಿಗಲಿದ್ದು, ಅರಮನೆ ನಗರಿ ಮೈಸೂರು ದೀಪಾಲಂಕಾರಗಳಿಂದ ಸಿಂಗಾರಗೊಂಡು ಮದುವಣಗಿತ್ತಿಯಂತೆ ಕಂಗೊಳಿಸುತ್ತಿದೆ.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಚಲನಚಿತ್ರೋತ್ಸವ, ಮಹಾರಾಜ ಕಾಲೇಜು ಮೈದಾನದಲ್ಲಿ ಆಹಾರ ಮೇಳ, ಕುಪ್ಪಣ್ಣ ಪಾರ್ಕ್ (ನಿಶಾದ್‌ ಬಾಗ್‌) ನಲ್ಲಿ ಫಲಪುಷ್ಪ ಪ್ರದರ್ಶನ, ದೊಡ್ಡಕೆರೆ ಮೈದಾನದಲ್ಲಿ ಕುಸ್ತಿ ಪಂದ್ಯಾವಳಿ, ವಸ್ತುಪ್ರದರ್ಶನ, ಕಾವಾ ಆವರಣದಲ್ಲಿ ಶಿಲ್ಪ, ಚಿತ್ರಕಲೆ ಹಾಗೂ ಕರಕುಶಲ ಕಲೆಗಳ ಪ್ರದರ್ಶನ, ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಮೈದಾನದಲ್ಲಿ ಕನ್ನಡ ಪುಸ್ತಕ ಮಾರಾಟ ಮೇಳ, ರಂಗಾಯಣದಲ್ಲಿ ‘ನವರಾತ್ರಿ ಜಾನಪದ ರಂಗೋತ್ಸವ’ ಹಾಗೂ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ರಾಜ್ಯ ದಸರಾ ಸಿಎಂ ಕಪ್ ಕ್ರೀಡಾಕೂಟ ನಡಯಲಿದೆ.