ಜಿಲ್ಲೆ

ಹಿಜಾಬ್ ಕುರಿತ ಹೈಕೋರ್ಟ್ ತೀರ್ಪು ಬೆನ್ನಿಗೇ ಭಟ್ಕಳದಲ್ಲಿ ಬಂದ್!

ಉತ್ತರಕನ್ನಡ: ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದ ಹಿಜಾಬ್ ವಿವಾದ ಕುರಿತಂತೆ ಇಂದು ಹೈಕೋರ್ಟ್ ತೀರ್ಪು ಪ್ರಕಟಿಸಿದ ಬೆನ್ನಿಗೇ ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಬಂದ್ ಕಂಡು ಬಂದಿದೆ.

ಶಾಲೆಯಲ್ಲಿ ಸಮವಸ್ತ್ರ ಕಡ್ಡಾಯ ಎಂಬ ರಾಜ್ಯ ಸರ್ಕಾರದ ಆದೇಶವನ್ನೇ ಹೈಕೋರ್ಟ್​ ಎತ್ತಿಹಿಡಿದು ತೀರ್ಪು ನೀಡಿದೆ. ಈ ಮೂಲಕ ಹಿಜಾಬ್ ಕುರಿತ ವಿವಾದ ತಾತ್ಕಾಲಿಕವಾಗಿ ತಣ್ಣಗಾದಂತಾಗಿದ್ದರೂ, ಕೆಲವರು ತೀರ್ಪಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಹೋಗುವುದಾಗಿ ತಿಳಿಸಿದ್ದಾರೆ.

ಇನ್ನು ಹೈಕೋರ್ಟ್ ತೀರ್ಪು ಪ್ರಕಟವಾಗುತ್ತಿದ್ದಂತೆ ರಾಜ್ಯದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದಿದ್ದು, ಒಂದು ಕೋಮಿನ ಜನರು ಹೆಚ್ಚಾಗಿರುವ ಭಟ್ಕಳದಲ್ಲಿ ಬಂದ್ ವಾತಾವರಣ ಕಾಣಿಸಿದೆ. ಇಲ್ಲಿನ ಮುಸ್ಲಿಂ ವರ್ತಕರು ತಮ್ಮ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ ಹೈಕೋರ್ಟ್ ಆದೇಶದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮುಂದಿನ ನಡೆ ಕುರಿತು ತಂಜೀಮ್ ಸಂಘಟನೆ ನೇತೃತ್ವದಲ್ಲಿ ಮುಸ್ಲಿಂ ವರ್ತಕರು ಸಭೆ ನಡೆಸಿದ್ದಾರೆ.