ಜಿಲ್ಲೆ

ಕರೊನಾ ಪಿಡುಗಿನಿಂದ ನೊಂದ ಮನಕೆ ಸುಗಮಸಂಗೀತ ದಿವ್ಯೌಷಧ

ಬೆಂಗಳೂರು: ಜಗತ್ತನ್ನೇ ಕಾಡುತ್ತಿರುವ ಕರೊನಾ ಯಾರನ್ನೂ ಬಿಟ್ಟಿಲ್ಲ. ಈ ಸೋಂಕಿನ ಹಾವಳಿಗೆ ಲಲಿತಕಲೆಗಳು, ಕಲೆಯ ಉಪಾಸಕರು ಕಂಗೆಟ್ಟು ಹೋಗಿದ್ದಾರೆ. ಆದರೆ ಕರೊನಾ ಸಾಂಕ್ರಾಮಿಕದಿಂದ ನೊಂದ ಮನಸ್ಸಿಗೆ, ಕೋವಿಡ್​-10 ಆತಂಕದಲ್ಲಿ ಇರುವವರಿಗೆ ಸುಗಮಸಂಗೀತ ದಿವ್ಯೌಷಧ ಎಂದು ಲೇಖಕ-ಗಾಯಕ ಮುರಳಿ ಅಭಿಪ್ರಾಯಪಟ್ಟರು.

ಬಾಗೂರು ಕಲಾವೇದಿಕೆಯಡಿ ನಡೆದ ಭಾವಗೀತೆಗಳ ಕಾರ್ಯಕ್ರಮ ವಸಂತಗಾನದಲ್ಲಿ ಅವರು ಮಾತನಾಡಿದರು. ವಸಂತಗಾನ ಕಾರ್ಯಕ್ರಮವನ್ನು ಡಾ. ಪಾರಿಜಾತ ಅವರು ಉದ್ಘಾಟಿಸಿದ್ದು, ಕಲೆ ಮೇಲ್ಮುಖವಾಗಿ ಬೆಳೆಯಲು ಕಲಾವಿದರ ಪರಿಶ್ರಮ ಬಹುಮುಖ್ಯವಾದ ಸಂಗತಿ. ಅಂಥ ಕಲಾವಿದರನ್ನು ಕಾಪಿಡುವುದು ಪ್ರೋತ್ಸಾಹಿಸುವುದು ಸಮಾಜದ ಆದ್ಯ ಕರ್ತವ್ಯ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಗೂರು ಮಾರ್ಕಂಡೇಯ ವಹಿಸಿದ್ದು, ಲಲಿತಕಲೆಗಳನ್ನು ಲಾಭಪ್ರದವಲ್ಲದ ಕಲೆಗಳೆಂದು ಬಹಳಷ್ಟು ಮಂದಿ ಭಾವಿಸಿದ್ದಾರೆ. ಆದರೆ ಮನಕ್ಕೆ ಸಂತೋಷ ನೀಡುವ ಕಲೆಗಳ ಅಗತ್ಯ ಇಂದು ಅಧಿಕವಾಗಿದೆ. ಪಾಲಕರು-ಶಿಕ್ಷಕರು ಹಣ ಮತ್ತು ಅಂಕದ ಹಿಂದೆ ಬಿದ್ದು ಮಕ್ಕಳ ಸಂತೋಷ ಮರೆತಿರುವಂತಿದೆ. ಇಂಥ ಕಾರಣಗಳಿಂದಾಗಿಯೇ ಅನಾಥಾಶ್ರಮ-ವೃದ್ಧಾಶ್ರಮಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ಎಂದರು. ಅಲ್ಲದೆ, ಲಲಿತಕಲೆಗಳಿಂದ ಜೀವನೋತ್ಸಾಹಕ್ಕೆ ಅತಿಮುಖ್ಯ ಎಂದೂ ಅಭಿಪ್ರಾಯಪಟ್ಟರು.

ಆಶೀಶ್ ನಾಯಕ್, ಸ್ನೇಹಲತಾ ಬಾಗೂರು, ಮಂಜುನಾಥ ಪುರಂದರೆ, ಸ್ವರ್ಣ ಬಾಗೂರು ಅವರ ಭಾವಗೀತೆಗಳನ್ನು ಹಾಡಿದರು. ತಬಲಾದಲ್ಲಿ ಸೂರ್ಯ ಬಾಗೂರು, ಶಶಾಂಕ ರಾಘವೇಂದ್ರ, ಧ್ಯಾನ್ ಕುಟಾಗುಳ್ಳ ಪುನೀತ್ ಇದ್ದರು. ಬಾಗೂರು ಕಲಾವೇದಿಕೆಯ ಕಾರ್ಯದರ್ಶಿ ಸ್ನೇಹಲತಾ ಬಾಗೂರು ಜತೆಗೆ ಇತರ ಗಣ್ಯರು ಉಪಸ್ಥಿತರಿದ್ದರು. ಈ ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗವಿತ್ತು.