ಜಿಲ್ಲೆ

ಪಾರ್ಟಿ ವೇಳೆ ಯುವತಿ ವಿಚಾರಕ್ಕೆ ಗಲಾಟೆಗೆ ಒಬ್ಬ ಬಲಿ

chandru

ಬೆಂಗಳೂರು: ಪಾರ್ಟಿ ವೇಳೆ ಯುವತಿ ವಿಚಾರಕ್ಕೆ ಸ್ನೇಹಿತರ ನಡುವಿನ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ. ಕಾಮಾಕ್ಷಿಪಾಳ್ಯ ನಿವಾಸಿ ಪುರುಷೋತ್ತಮ್ (೩೪) ಕೊಲೆಯಾದ ವ್ಯಕ್ತಿ. ಕೃತ್ಯ ಎಸಗಿದ ಗಿರೀಶ್ ತಲೆಮರೆಸಿಕೊಂಡಿದ್ದು ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ತಿಳಿಸಿದ್ದಾರೆ.

ಪುರುಷೋತ್ತಮ್ ವಾಹನ ಚಾಲಕನಾಗಿದ್ದು ಕುಟುಂಬದ ಜತೆ ಕಾಮಾಕ್ಷಿಪಾಳ್ಯದಲ್ಲಿ ನೆಲೆಸಿದ್ದ. ಅದೇ ಏರಿಯಾದ ನಿವಾಸಿ ಗಿರೀಶ್ ಸ್ನೇಹಿತನಾಗಿದ್ದ. ಮಂಗಳವಾರ (ಮೇ.೫) ಮಧ್ಯಾಹ್ನ ೨ ಗಂಟೆಯಲ್ಲಿ ಇಬ್ಬರೂ ಸೇರಿ ಗಿರೀಶ್ ಮನೆಯಲ್ಲಿ ಪಾರ್ಟಿ ಮಾಡಿದ್ದರು. ಈ ವೇಳೆ ಯುವತಿ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿತ್ತು. ಬಳಿಕ ಪುರುಷೋತ್ತಮ್ ತನ್ನ ಮನೆಗೆ ತೆರಳಿದ್ದ. ರಾತ್ರಿ 8.45ರಲ್ಲಿ ಮಾರುತಿನಗರಕ್ಕೆ ಬಂದಿದ್ದ. ಈ ವಿಚಾರ ತಿಳಿದಿದ್ದ ಗಿರೀಶ್ ಅಲ್ಲಿಗೆ ತೆರಳಿ ಚೂರಿಯಿಂದ ಇರಿದು ಹತ್ಯೆ ಮಾಡಿ ಪರಾರಿಯಾಗಿದ್ದಾನೆ.

ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಘಟನಾ ಸ್ಥಳ ಪರಿಶೀಲಿಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು‌ ಪೊಲೀಸರು ಮಾಹಿತಿ ನೀಡಿದ್ದಾರೆ.