ಜಿಲ್ಲೆ

ಸ್ನೇಹಿತರ ಜಗಳ ಕೊಲೆಯಲ್ಲಿ ಅಂತ್ಯ : ಮಂಗಳೂರಿನ ಪಡೀಲ್ ನಿವಾಸಿ ಕಾರ್ಕಳದಲ್ಲಿ ಹತ್ಯೆ ಆರೋಪಿ ಬಂಧನ

ಸೌಮ್ಯ ಆರ್

ಕಾರ್ಕಳ: ಕಾರ್ಕಳದ ಕುಂಟಲ್ಪಾಡಿ ಎಂಬಲ್ಲಿ ಬಾಲಾಜಿ ಆರ್ಕೇಡ್ ನಿವಾಸಿ ನವೀನ್ ಪೂಜಾರಿ (50) ಎಂಬುವರನ್ನು ಸ್ನೇಹಿತನೇ ಇರಿದು ಕೊಲೆ ಮಾಡಿದ ಘಟನೆ ಮಂಗಳವಾರ ಮುಂಜಾನೆ ನಡೆದಿದೆ. ಮೂಲತಃ ಮಂಗಳೂರಿನ ಪಡೀಲ್ ನಿವಾಸಿಯಾಗಿರುವ ನವೀನ್ ಪೂಜಾರಿ ಕಾರ್ಕಳದಲ್ಲಿ ವಾಸವಾಗಿದ್ದರು.

ಘಟನಾ ಸ್ಥಳಕ್ಕೆ ಉಡುಪಿ ಎಸ್‌ಪಿ ಹರಿರಾಂ ಶಂಕರ್, ಕಾರ್ಕಳ ಉಪವಿಭಾಗದ ಎಎಸ್ಪಿ ಡಾ.ಹರ್ಷಪ್ರಿಯಂವದಾ, ವೃತ್ತ ನಿರೀಕ್ಷಕ ಮಂಜಪ್ಪ ಡಿ.ಆರ್., ನಗರ ಠಾಣೆ ಎಸ್‌ಐ ಮುರಳೀಧರ್ ನಾಯ್ಕ, ಗ್ರಾಮಾಂತರ ಠಾಣೆ ಎಸ್‌ಐ ಪ್ರಸನ್ನ ಎಂ.ಎಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸ್ಥಳದಲ್ಲಿ ದ್ವಿಚಕ್ರ ವಾಹನವೊಂದು ಪತ್ತೆಯಾಗಿದ್ದು, ತನಿಖೆ ಕೈಗೆತ್ತಿಕೊಂಡ ಪೊಲೀಸರು ಬೆರಳಚ್ಚು ತಂಡ ಹಾಗೂ ಶ್ವಾನದಳವನ್ನು ಕರೆಸಿ ಪರಿಶೀಲನೆ ನಡೆಸಿ ಕೊಲೆ ಆರೋಪಿ ಖಾಸಗಿ ಬಸ್ ಚಾಲಕ, ಬೆಳ್ತಂಗಡಿ ಮೂಲದ ಪರೀಕ್ಷಿತ್ ಎಂಬಾತನನ್ನು ಬಂಧಿಸಿದ್ದಾರೆ.

ಸ್ನೇಹಿತನಿಂದಲೇ ಕೊಲೆ: ನವೀನ್ ಪೂಜಾರಿಯನ್ನು ಆತನ ಗೆಳೆಯನೇ ಕೊಲೆಗೈದಿರುವುದಾಗಿ ತನಿಖೆಯಿಂದ ಬಹಿರಂಗವಾಗಿದೆ. ಸೋಮವಾರ ರಾತ್ರಿ ನವೀನ್ ಹಾಗೂ ದೂಪದಕಟ್ಟೆಯಲ್ಲಿರುವ ಬಾರ್‌ವೊಂದರಲ್ಲಿ ಮದ್ಯಪಾನ ಮಾಡಿದ್ದು, ಈ ವೇಳೆ ಇಬ್ಬರ ನಡುವೆ ಹುಡುಗಿ ಹಾಗೂ ವೈಯಕ್ತಿಕ ವಿಚಾರಕ್ಕೆ ಜಗಳವಾಗಿದೆ. ಬಳಿಕ ಅಲ್ಲಿಂದ ತೆರಳಿದ್ದರು. ಇದಾದ ಕೆಲ ಗಂಟೆಗಳ ಬಳಿಕ ನವೀನ್ ಪರೀಕ್ಷಿತ್‌ಗೆ ಕರೆ ಮಾಡಿ ಆನೆಕೆರೆಯಲ್ಲಿರುವ ಬಾರ್‌ಗೆ ಬರುವಂತೆ ತಿಳಿಸಿದ್ದಾನೆ. ಸುರಕ್ಷತೆಗಾಗಿ ಚೂರಿಯೊಂದಿಗೆ ಪರೀಕ್ಷಿತ್ ಸ್ಥಳಕ್ಕೆ ತೆರಳಿದ್ದ. ಅಲ್ಲಿ ಅವರಿಬ್ಬರ ಮಧ್ಯೆ ಮತ್ತೆ ಮಾತಿನ ಚಕಮಕಿ ನಡೆದು ಬಾರ್‌ನಿಂದ ಹೊರ ಬಂದು ಕುಂಟಲ್ಪಾಡಿ ಎಂಬಲ್ಲಿಗೆ ತಲುಪುವಾಗ ಪರೀಕ್ಷಿತ್ ತನ್ನಲ್ಲಿದ್ದ ಚೂರಿಯಿಂದ ನವೀನ್‌ನ ಬೆನ್ನು, ಹೊಟ್ಟೆ, ತೋಳಿನ ಭಾಗಕ್ಕೆ ಇರಿದು ಸ್ಥಳದಿಂದ ಪರಾರಿಯಾಗಿದ್ದಾನೆ. ಜೀವನ್ಮರಣ ಸ್ಥಿತಿಯಲ್ಲಿದ್ದ ನವೀನ್ ಒದ್ದಾಡಿ ರಸ್ತೆ ಬದಿಯಲ್ಲೇ ಕೊನೆಯುಸಿರೆಳೆದಿದ್ದಾನೆ.

ಕೊಲೆಯಾದ ನವೀನ್ ಪೂಜಾರಿ ಕೆಲ ಸಮಯಗಳ ಹಿಂದೆ ಕಾರ್ಕಳಕ್ಕೆ ಬಂದು ನಗರದ ಬಾಲಾಜಿ ಆರ್ಕೇಡ್‌ನಲ್ಲಿ ವಾಸವಾಗಿದ್ದ. ಈ ಹಿಂದೆ ಬಸ್ ಚಾಲಕನಾಗಿದ್ದು, ಬಳಿಕ ಲಾರಿ ಚಾಲಕನಾಗಿ ದುಡಿಯುತ್ತಿದ್ದ. ಇತ್ತೀಚೆಗೆ ಕೆಲ ಸಮಯದಿಂದ ಬದಲಿ ಚಾಲಕನಾಗಿ ದುಡಿಯುವುದರ ಜತೆಗೆ ಬಡ್ಡಿ ವ್ಯವಹಾರ ನಡೆಸಿಕೊಂಡು ಬರುತ್ತಿದ್ದ. ನವೀನ್ ಪೂಜಾರಿ ಪತ್ನಿ ಮತ್ತು ಮಕ್ಕಳು ಮಂಗಳೂರಿನಲ್ಲಿ ನೆಲೆಸಿದ್ದಾರೆ.