ರಾಯಚೂರು: ಕರ್ನಾಟಕದ ಜೈಲೊಂದರಲ್ಲಿ ಇರುವ ಗೆಳೆಯನನ್ನು ನೋಡಲು ಹೊರರಾಜ್ಯದಿಂದ ಬಂದಿದ್ದ ಆರೋಪಿಯೊಬ್ಬ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈತನನ್ನು ಕರ್ನಾಟಕದ ಪೊಲೀಸರು ಸಿನಿಮೀಯ ರೀತಿಯಲ್ಲಿ ಬಂಧಿಸಿದ್ದಾರೆ.
ಮಹಾರಾಷ್ಟ್ರ ಮೂಲದ ಸಲೀಂ ಯಾಸೀನ್ (48) ಬಂಧಿತ ಆರೋಪಿ. ಕೊಲೆ ಆರೋಪಿಯಾಗಿರುವ ಈತ ಮಹಾರಾಷ್ಟ್ರ ಪೊಲೀಸರಿಗೆ ಬೇಕಾಗಿದ್ದು, ಅವರು ಈತನ ಹುಡುಕಾಟದಲ್ಲಿದ್ದರು. ಈತನ ಪತ್ತೆಗಾಗಿ ಕಾರ್ಯಾಚರಣೆಯಲ್ಲಿದ್ದ ಪೊಲೀಸರಿಗೆ ಮೊಬೈಲ್ಫೋನ್ ಜಾಡಿನಿಂದಾಗಿ ಈತ ಕರ್ನಾಟಕದ ರಾಯಚೂರಿಗೆ ತೆರಳಿರುವುದು ಗೊತ್ತಾಗಿತ್ತು.
ರಾಯಚೂರು ಪೊಲೀಸರಿಗೆ ಮಾಹಿತಿ ನೀಡಿದ ಮಹಾರಾಷ್ಟ್ರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆಯುವಂತೆ ತಿಳಿಸಿದ್ದರು. ಆ ಮೇರೆಗೆ ಕಾರ್ಯಾಚರಣೆಗಿಳಿದ ರಾಯಚೂರಿನ ದೇವದುರ್ಗ ಪೊಲೀಸರು, ದೇವದುರ್ಗ ಜೈಲಿನಲ್ಲಿರುವ ಗೆಳೆಯನನ್ನು ನೋಡಲು ಬಂದಿದ್ದ ಆರೋಪಿಯ ಸೆರೆಗೆ ತಂತ್ರ ಹೂಡಿದ್ದರು.
ರಸ್ತೆಗೆ ವಾಹನಗಳನ್ನು ಅಡ್ಡವಿರಿಸಿ ಆರೋಪಿಯ ಕಾರ್ ಚೇಸ್ ಮಾಡಿದ ಪೊಲೀಸರು, ಖತರ್ನಾರ್ ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಜಾಲಹಳ್ಳಿ ಪಟ್ಟಣದಲ್ಲಿ ರಸ್ತೆಗೆ ಬ್ಯಾರಿಕೇಡ್ ಹಾಕಿ, ಖಾಸಗಿ ವಾಹನಗಳನ್ನು ಅಡ್ಡ ನಿಲ್ಲಿಸಿ, ಆರೋಪಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಆರೋಪಿ ಸದ್ಯ ಜಾಲಹಳ್ಳಿ ಪೊಲೀಸರ ವಶದಲ್ಲಿದ್ದು, ರಾತ್ರಿ ಮಹಾರಾಷ್ಟ್ರ ಪೊಲೀಸರು ವಶಕ್ಕೆ ಪಡೆಯಲಿದ್ದಾರೆ.