ಕಟೀಲು: ಎಲ್ಲರ ಮನೆಗಳಲ್ಲೂ ಇವತ್ತು ಒಂದಲ್ಲ ಎರಡೆರೆಡು ವಾಹನಗಳಿವೆ. ಆದರೆ ದೇವರ ವಾಹನ ರಥವನ್ನು ಒಬ್ಬನಿಂದ ಎಳೆಯಲು ಸಾಧ್ಯವಿಲ್ಲ. ಭಕ್ತರೆಲ್ಲರೂ ಸೇರಿ ಎಳೆಯಬೇಕು. ರಥದಲ್ಲಿ ದೇವರು ಮಾತ್ರ ಕುಳಿತುಕೊಳ್ಳಬಹುದು. ಇಂತಹ ವಿಶಿಷ್ಟವಾದ ಬ್ರಹ್ಮರಥವನ್ನು ಕಟೀಲು ದೇಗುಲದಲ್ಲಿ ನಿರ್ಮಿಸಲು ಉದ್ದೇಶಿಸಿರುವುದು ಅಭಿನಂದನಾರ್ಹ ಎಂದು ಪಲಿಮಾರು ಮಠದ ಶ್ರೀ ವಿದ್ಯಾಧೀಶ ಸ್ವಾಮೀಜಿ ಹೇಳಿದರು.
ಕಟೀಲು ಶ್ರೀದುರ್ಗಾಪರಮೇಶ್ವರಿ ದೇಗುಲದಲ್ಲಿ ನೂತನ ಬ್ರಹ್ಮರಥಕ್ಕೆ ಮುಹೂರ್ತ ನೆರವೇರಿಸಿ, ರಕ್ತೇಶ್ವರೀ ಸಾನ್ನಿಧ್ಯದ ಜೀರ್ಣೋದ್ಧಾರಕ್ಕೆ ಚಾಲನೆ ನೀಡಿ, ಎಕ್ಕಾರಿನಲ್ಲಿ ಕಾವೂರು ಮುಗ್ರೊಡಿ ಕನ್‌ಸ್ಟ್ರಕ್ಷನ್ ಸುಧಾಕರ ಶೆಟ್ಟಿ ಹಾಗೂ ಅಮರ್ ಇನ್ಪ್ರಾಪ್ರೊಜೆಕ್ಟ್ ಅನಿಲ್ ಕುಮಾರ್ ಶೆಟ್ಟಿ ನಿರ್ಮಿಸಿ ಸಮರ್ಪಿಸಿದ ನೂತನ ಸ್ವಾಗತ ಗೋಪುರ ಉದ್ಘಾಟಿಸಿ ಮಾತನಾಡಿದರು.
ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ, ಪಲಿಮಾರು ಮಠದ ಕಿರಿಯ ಯತಿ ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ, ಕಟೀಲು ದೇಗುಲ ಆನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಶಿಬರೂರು ಕೃಷ್ಣರಾಜ ತಂತ್ರಿ, ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಆಸ್ರಣ್ಣ, ಪ್ರಸಾದ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ದೇಗುಲದ ಆಡಳಿತ ಸಮಿತಿ ಅಧ್ಯಕ್ಷ ಸನತ್ ಕುಮಾರ ಶೆಟ್ಟಿ ಕೊಡೆತ್ತೂರುಗುತ್ತು, ಕಿಶೋರ್ ಶೆಟ್ಟಿ ಕೊಡೆತ್ತೂರುಗುತ್ತು, ಮಾಜಿ ಸಂಸದರು, ಶಾಸಕ ಉಮಾನಾಥ ಕೋಟ್ಯಾನ್, ಮುಂಬೈ ಉದ್ಯಮಿ ಸಾನಿ ವಾಮಯ್ಯ ಶೆಟ್ಟಿ, ಶಂಕರ್ ಎಲೆಕ್ಟ್ರಿಕಲ್ಸ್ ರಾಜೇಶ್ ಶೆಟ್ಟಿ, ಶಿಬರೂರು ಪ್ರದ್ಯುಮ್ನ ರಾವ್, ಬಿಪಿನ್ ಚಂದ್ರ ಶೆಟ್ಟಿ, ಪ್ರವೀಣ್ ಭಂಡಾರಿ, ಸಿ.ಎ.ಸುದೇಶ್ ರೈ, ವಿಷ್ಣುಮೂರ್ತಿ ಮತ್ತಿತರರಿದ್ದರು.
ವಾಸ್ತುತಜ್ಞ ಗುಂಡಿಬೈಲು ಸುಬ್ರಹ್ಮಣ್ಯ ಭಟ್ ಬ್ರಹ್ಮರಥ ರಕ್ತೇಶ್ವರೀ ಸಾನ್ನಿಧ್ಯದ ಜೀರ್ಣೋದ್ಧಾರದ ಮಾಹಿತಿ ನೀಡಿದರು. ಕ್ಯಾಪ್ಸ್ ಫೌಂಡೇಷನ್ ಸಿಎ ಚಂದ್ರಶೇಖರ ಶೆಟ್ಟಿ ಅವರ ವತಿಯಿಂದ ಕಟೀಲು ಉತ್ಸವದ ಸಂದರ್ಭ ಸೇವೆ ಸಲ್ಲಿಸುವ ಒಂದು ಸಾವಿರಕ್ಕೂ ಮಿಕ್ಕಿದ ಸ್ವಯಂಸೇವಕರಿಗೆ ಟೀಶರ್ಟ್, ಬಟ್ಟೆ ಚೀಲಗಳನ್ನು ಸಾಂಕೇತಿಕವಾಗಿ ನೀಡಲಾಯಿತು. ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿದರು. ನಿತೇಶ್ ಶೆಟ್ಟಿ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.