ಜಿಲ್ಲೆ

ಚಳಿಗಾಲದ ಅಧಿವೇಶನದಲ್ಲಾಗಲಿದೆ 'ಮಂಡೇ'ಬಿಸಿ: ಸದನದಲ್ಲಿ ಕೋಲಾಹಲ ಎಬ್ಬಿಸಲಿದೆ ಮತಾಂತರ ನಿಷೇಧ ವಿಧೇಯಕ!

Webdesk - Ravikanth

ಬೆಳಗಾವಿ: ಸುವರ್ಣ ವಿಧಾನಸೌಧದದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಅಕ್ಷರಶಃ 'ಮಂಡೇ'ಬಿಸಿ ಆಗುವ ಎಲ್ಲ ಲಕ್ಷಣಗಳು ಕಾಣಿಸಲಾರಂಭಿಸಿವೆ. ಅರ್ಥಾತ್​, ಇದೇ 'ಮಂಡೇ' ಅಂದರೆ ಸೋಮವಾರ ಮತಾಂತರ ನಿಷೇಧ ಕುರಿತ ಮಸೂದೆ ಮಂಡನೆಯಾಗಲಿದ್ದು, ಅಂದು ನಡೆಯಲಿರುವ ಬಿಸಿಬಿಸಿ ಚರ್ಚೆ ಚಳಿಗಾಲದ ಅಧಿವೇಶನದ ಕಾವೇರಿಸುವ ಲಕ್ಷಣಗಳು ಗೋಚರಿಸಿವೆ.

ಮತಾಂತರ ನಿಷೇಧ ಕಾಯ್ದೆ ತಂದೇ ತರುತ್ತೇವೆ ಎಂದು ಆಡಳಿತಾರೂಢ ಬಿಜೆಪಿ ಹಾಗೂ ಯಾವುದೇ ಕಾರಣಕ್ಕೂ ಕಾಯ್ದೆ ಜಾರಿಗೆ ಬಿಡುವುದಿಲ್ಲ, ಅದರ ವಿರುದ್ಧ ಸದನದ ಒಳಗೂ ಹೊರಗೂ ಹೋರಾಟ ನಡೆಸುವುದಾಗಿ ಪ್ರತಿಪಕ್ಷ ಕಾಂಗ್ರೆಸ್​ ಪಟ್ಟು ಹಿಡಿದಿದ್ದು ಯಾರ ಕೈ ಮೇಲಾಗಲಿದೆ ಎಂಬ ಕುತೂಹಲ ಕೆರಳಿಸಿದೆ.

ಆಡಳಿತ ಪಕ್ಷವು ಮತಾಂತರ ನಿಷೇಧ ಮಸೂದೆಯನ್ನು ಮಂಡಿಸಲು ಸೋಮವಾರ ಸದನದ ಅನುಮತಿ ಕೋರುವ ಜತೆಗೆ ಈ ವಿಧೇಯಕದಲ್ಲಿ ಏನೇನಿದೆ ಎಂಬುದನ್ನು ಅಂದು ಸವಿಸ್ತಾರವಾಗಿ ತೆರೆದಿಡಲಿದೆ. ಮತಾಂತರ ನಿಷೇಧಿಸದೆ ಬೇರೆ ಗತ್ಯಂತರವೇ ಇಲ್ಲ ಎಂದು ಬಿಜೆಪಿ, ಮತಾಂತರ ವಿಷಯದಲ್ಲಿ ಯಾವುದೇ ಸ್ಥಿತ್ಯಂತರಕ್ಕೆ ಅವಕಾಶ ಕೊಡುವುದಿಲ್ಲ ಎಂದು ಕಾಂಗ್ರೆಸ್​ ಈಗಾಗಲೇ ತೊಡೆ ತಟ್ಟಿ ಸಜ್ಜಾಗಿವೆ. ಕಾಂಗ್ರೆಸ್ ಈ ನಿಟ್ಟಿನಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆದಿದ್ದು, ಅಂದು ಎಲ್ಲ ಸದಸ್ಯರೂ ಸದನದಲ್ಲಿ ಹಾಜರಿರಬೇಕು ಎಂದು ವಿಪ್​ ಕೂಡ ಜಾರಿ ಮಾಡಿದೆ.

ಮತಾಂತರ ನಿಷೇಧ ವಿಧೇಯಕ ಮಂಡನೆಗೆ ಮುಂದಾಗಿರುವ ಬಿಜೆಪಿ-ಕಾಂಗ್ರೆಸ್ ಪಕ್ಷಗಳ ಲೆಕ್ಕಾಚಾರ ಹಾಗೂ ಮುಂದಿನ ನಡೆ, ಮತಾಂತರ ನಿಷೇಧ ಮಸೂದೆಯಲ್ಲಿನ ಅಂಶಗಳು ಮತ್ತಿತರ ವಿಷಯಗಳ ಕುರಿತು ವಿಜಯವಾಣಿಯ ಶ್ರೀಕಾಂತ್ ಶೇಷಾದ್ರಿ ಮತ್ತು ಮೃತ್ಯುಂಜಯ ಕಪಗಲ್​ ಅವರ ವಿಷಯ ಮಂಡನೆ ಇಲ್ಲಿನ ವಿಡಿಯೋದಲ್ಲಿದೆ. ಮೇಲಿನ ಲಿಂಕ್​ ಕ್ಲಿಕ್ ಮಾಡುವ ಮೂಲಕ ವಿಜಯವಾಣಿ ಯೂ-ಟ್ಯೂಬ್​ ಚಾನೆಲ್​ನಲ್ಲಿರುವ ಈ ವಿಡಿಯೋ ವೀಕ್ಷಿಸಿ, ವಿವರವಾದ ಮಾಹಿತಿ ತಿಳಿಯಿರಿ.