ಜಿಲ್ಲೆ

ವಿಧಾನ ಪರಿಷತ್ ಚುನಾವಣೆ: ಶಿವಮೊಗ್ಗ-ಚಿತ್ರದುರ್ಗ ಎರಡೂ ಕ್ಷೇತ್ರಗಳಲ್ಲಿಲ್ಲ ಜೆಡಿಎಸ್ ಅಭ್ಯರ್ಥಿ

Webdesk - Ravikanth
ಶಿವಮೊಗ್ಗ ಹಾಗೂ ಚಿತ್ರದುರ್ಗ ವಿಪ ಕ್ಷೇತ್ರಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ. ಪರಿಣಾಮ, ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಪ್ರಸ್ತುತ ಕೈಯಲ್ಲಿರುವ ಎರಡೂ ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಕೈ ನಾಯಕರು, ಕೇಸರಿ ಬಾವುಟ ಹಾರಿಸುವ ಮೂಲಕ ಗಳಿಸಿಕೊಳ್ಳಲು ಕಮಲ ಪಡೆ ಅವಿತರ ಶ್ರಮ ಹಾಕುತ್ತಿವೆ.

ಚಿತ್ರದುರ್ಗದ ಕೋಟೆ ಭೇದಿಸಲು ಪೈಪೋಟಿ

ಚಿತ್ರದುರ್ಗ ವಿಧಾನ ಪರಿಷತ್ ಕ್ಷೇತ್ರ

ಕೆ.ಎಸ್. ನವೀನ್, ಬಿ. ಸೋಮಶೇಖರ್

| ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ

ಬಿಜೆಪಿ- ಕಾಂಗ್ರೆಸ್ ನಡುವೆ ನೇರ ಸೆಣಸಾಟಕ್ಕೆ ಚಿತ್ರದುರ್ಗ ವಿಧಾನಪರಿಷತ್ ಅಖಾಡ ಸಜ್ಜಾಗಿದೆ. ಸತತ 3ನೇ ಬಾರಿ ಅದೃಷ್ಟ ಪರೀಕ್ಷೆಗೆ ಮುಂದಾಗಿರುವ ಬಿಜೆಪಿ ಅಭ್ಯರ್ಥಿ ಕೆ.ಎಸ್.ನವೀನ್, ರಾಜಕೀಯ ಭವಿಷ್ಯವನ್ನೇ ಪಣಕ್ಕಿಟ್ಟು ಕಣಕ್ಕೆ ಇಳಿದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಬಿ.ಸೋಮಶೇಖರ್ ತಮ್ಮ ರಾಜಕೀಯ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. 2009ರಲ್ಲಿ ಪಡೆದಿದ್ದ ಸ್ಥಾನವನ್ನು ಮರಳಿ ಪಡೆಯಲು ಬಿಜೆಪಿ ಹಾಗೂ ಸದಸ್ಯತ್ವ ‘ಕೈ’ ಜಾರದಂತೆ ಕಾಂಗ್ರೆಸ್ ತಂತ್ರ-ಪ್ರತಿತಂತ್ರ ರೂಪಿಸುತ್ತಿವೆ.

ಪರಸ್ಪರ ಎದುರಾಳಿಗಳು ಕೋಟ್ಯಧಿಪತಿಗಳೇ. ಚುನಾವಣೆ ವೆಚ್ಚಕ್ಕೆ ಮಿತಿ ಇಲ್ಲ ಎಂಬ ಆಯೋಗದ ಹೇಳಿಕೆ ಮಿತಿ ಇಲ್ಲದ ಖರ್ಚಿಗೆ ದಾರಿಯಾಗಲಿದೆ. ಎಂಎಲ್​ಸಿ ರಘು ಆಚಾರ್ ಹಿಂದೆ ಸರಿದಿದ್ದರಿಂದ ಸೋಮಶೇಖರ್​ಗೆ ಅವಕಾಶ ಸಿಕ್ಕಿದೆ. ಕಳೆದ ಬಾರಿ ಕೆಲವೇ ಮತಗಳ ಅಂತರದಲ್ಲಿ ಸೋತಿರುವ ಅನುಕಂಪ, ಹಿಂದಿನ ಲೋಪದೋಷ ಸರಿಪಡಿಸಿಕೊಂಡು ಎಲ್ಲರ ವಿಶ್ವಾಸ ಮತ್ತು ಸಂಘಟನಾ ಶಕ್ತಿ ಬೆನ್ನಿಗಿಟ್ಟುಕೊಂಡು ನವೀನ್ ಪ್ರಚಾರ ಬಿರುಸುಗೊಳಿಸಿದ್ದಾರೆ. ಕಾಂಗ್ರೆಸ್ ನಾಯಕರು, ಕಾರ್ಯಕರ್ತರ ಪಡೆಯೊಂದಿಗೆ ಸೋಮಶೇಖರ್ ಮತ ಬೇಟೆಗೆ ಇಳಿದಿದ್ದು, ಎದುರಾಳಿಗೆ ಸೆಡ್ಡು ಹೊಡೆದಿದ್ದಾರೆ. ಮತದಾರರ ಮನವೊಲಿಕೆಗೆ ಎರಡೂ ಪಕ್ಷಗಳು ಸಾಕಷ್ಟು ಕಸರತ್ತು ನಡೆಸುತ್ತಿವೆ. ಇನ್ನು ಅಭ್ಯರ್ಥಿಯನ್ನು ಕಣಕ್ಕಿಳಿಸದ ಜೆಡಿಎಸ್ ಬೆಂಬಲ ಯಾರಿಗೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಾಗಿದೆ.

ಪಕ್ಷೇತರ ಅಭ್ಯರ್ಥಿ ಕಣದಲ್ಲಿ: ಕಾಂಗ್ರೆಸ್, ಬಿಜೆಪಿ ಜತೆಗೆ ಪಕ್ಷೇತರ ಅಭ್ಯರ್ಥಿ ಹನುಮಂತಪ್ಪ ದುರ್ಗ ಕಣದಲ್ಲಿದ್ದಾರೆ. ಚುನಾವಣೆ ನಡೆಯಬೇಕಿರುವ ದಾವಣ ಗೆರೆಯ ಮಲೆಬೆನ್ನೂರು ಪುರಸಭೆ, ಚಿತ್ರದುರ್ಗದ ನಾಯಕನಹಟ್ಟಿ ಪಪಂ, ಜಿಪಂ, ತಾಪಂ ಸದಸ್ಯರನ್ನು ಹೊರತುಪಡಿಸಿ 5073 ಮತದಾರರು ಇದ್ದಾರೆ.

ಕ್ಷೇತ್ರ ವ್ಯಾಪ್ತಿ, ಪ್ರಾಬಲ್ಯ: ಚಿತ್ರದುರ್ಗ ಜಿಲ್ಲೆಯ ಆರೂ ತಾಲೂಕುಗಳು- ಮೊಳಕಾಲ್ಮೂರು, ಚಳ್ಳಕೆರೆ, ಚಿತ್ರದುರ್ಗ, ಹಿರಿಯೂರು, ಹೊಳಲ್ಕೆರೆ ಹಾಗೂ ಹೊಸದುರ್ಗ. ದಾವಣಗೆರೆಯ ಮೂರು ತಾಲೂಕು- ಹರಿಹರ, ದಾವಣಗೆರೆ ಹಾಗೂ ಜಗಳೂರು ಕ್ಷೇತ್ರದ ವ್ಯಾಪ್ತಿಗೆ ಸೇರಿವೆ. ಕ್ಷೇತ್ರ ವ್ಯಾಪ್ತಿಯಲ್ಲಿರುವ 11 ವಿಧಾನಸಭಾ ಕ್ಷೇತ್ರಗಳ ಪೈಕಿ ಮೂವರು ಶಾಸಕರು, 15ಕ್ಕೂ ಹೆಚ್ಚು ಮಾಜಿ ಶಾಸಕರು, ಮಾಜಿ ಸಚಿವರು, ಮಾಜಿ ಸಂಸದರು, ವಿಧಾನಪರಿಷತ್ ಮಾಜಿ ಸದಸ್ಯರು ಅವಳಿ ಜಿಲ್ಲೆಗಳಲ್ಲಿದ್ದು, ಗೆಲುವು ಖಚಿತವೆಂದು ಕಾಂಗ್ರೆಸ್ ಕೂಡ ವಿಶ್ವಾಸ ವ್ಯಕ್ತಪಡಿಸಿದೆ.

ಮಹಿಳೆಯರದ್ದೇ ಮೇಲುಗೈ: ಕಳೆದ ಬಾರಿಯಂತೆ ಈ ಬಾರಿಯೂ ಮಹಿಳಾ ಮತದಾರರ ಸಂಖ್ಯೆ ಚಿತ್ರದುರ್ಗ-ದಾವಣಗೆರೆ ವಿಧಾನಪರಿಷತ್ ಕ್ಷೇತ್ರದಲ್ಲಿ ಹೆಚ್ಚಿದೆ. ಕಳೆದ ಬಾರಿ 2772 ಮಹಿಳಾ ಹಾಗೂ 2613 ಪುರುಷ ಮತದಾರರ ಸಹಿತ 5385 ಮತದಾರರಿದ್ದರು. ಈ ಬಾರಿ 2384 ಪುರುಷ ಮತದಾರರು ಹಾಗೂ 2689 ಮಹಿಳೆಯರು ಮತದಾನದ ಹಕ್ಕು ಹೊಂದಿದ್ದಾರೆ. ಇನ್​ವ್ಯಾಲಿಡ್ ವೋಟ್, ಫಲಿತಾಂಶವನ್ನೇ ಬುಡಮೇಲು ಮಾಡುವ ಸಾಧ್ಯತೆಯಿಂದಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳ ನಾಯಕರು ಎಚ್ಚರಿಕೆಯಿಂದ ಪ್ರಥಮ ಪ್ರಾಶಸ್ಱದ ಮತಕ್ಕೆ ಮನವಿ ಮಾಡುತಿದ್ದಾರೆ.

2 ಬಾರಿ ಗೆದ್ದಿದ್ದ ರಘು ಆಚಾರ್: ಜಿ.ಎಚ್.ತಿಪ್ಪಾರೆಡ್ಡಿ ಅವಧಿಗೆ ಮುನ್ನ ನೀಡಿದ್ದ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಪಕ್ಷೇತರವಾಗಿ ಗೆದ್ದಿದ್ದ ರಘು ಆಚಾರ್, 2015ರಲ್ಲಿ ಕಾಂಗ್ರೆಸ್ಸಿನಿಂದ ಕಣಕ್ಕಿಳಿದು ನವೀನ್ ಅವರನ್ನು 2ನೇ ಬಾರಿ ಪರಾಜಿತಗೊಳಿಸಿದ್ದರು. 2015ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಈಗ ಬಿಜೆಪಿ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿದೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನೀಡಲಾಗಿದ್ದು, ಕೇಂದ್ರ ಸಚಿವರ ಸಹಿತ ಇಬ್ಬರು ಸಂಸದರು, ದಾವಣಗೆರೆ-ಚಿತ್ರದುರ್ಗ ಜಿಲ್ಲೆಗಳ ಶಾಸಕರು, ಎಂಎಲ್​ಸಿಗಳು ಹಾಗೂ ಸಂಘಟನೆ ಬಲದೊಂದಿಗೆ ಗೆಲ್ಲುವ ವಿಶ್ವಾಸ ಬಿಜೆಪಿಯದ್ದಾಗಿದೆ.

**

ಶಿವಮೊಗ್ಗ ಸೀರುಂಡೆಗೆ ಪ್ರಸನ್ನ ಅರುಣ್ ಫೈಟ್

ಶಿವಮೊಗ್ಗ ವಿಧಾನ ಪರಿಷತ್ ಕ್ಷೇತ್ರ

ಡಿ.ಎಸ್. ಅರುಣ್, ಪ್ರಸನ್ನಕುಮಾರ್

| ಅರವಿಂದ ಅಕ್ಲಾಪುರ ಶಿವಮೊಗ್ಗ

ಕಳೆದ ಚುನಾವಣೆಯಲ್ಲಿ ತ್ರಿಕೋನ ಹಣಾಹಣಿಗೆ ಸಾಕ್ಷಿಯಾಗಿದ್ದ ಶಿವಮೊಗ್ಗ ಕ್ಷೇತ್ರ, ಈ ಬಾರಿ ನೇರ ಸ್ಪರ್ಧೆಗೆ ಸಜ್ಜಾಗಿದೆ. ಮರು ಆಯ್ಕೆಗೆ ಕಾಂಗ್ರೆಸ್ ಅಭ್ಯರ್ಥಿ ಆರ್.ಪ್ರಸನ್ನಕುಮಾರ್ ಹವಣಿಸುತ್ತಿದ್ದರೆ, ಆರು ವರ್ಷಗಳ ಬಳಿಕ ಕ್ಷೇತ್ರ ವಶಕ್ಕೆ ಬಿಜೆಪಿ ಪ್ರಯತ್ನ ನಡೆಸಿದೆ. ಬಿಜೆಪಿ ಅಭ್ಯರ್ಥಿ ಡಿ.ಎಸ್.ಅರುಣ್ ಪರ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಎಲ್ಲ ತಾಲೂಕಿನಲ್ಲೂ ಪ್ರಚಾರ ನಡೆಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಚಾರ, ಜೆಡಿಎಸ್ ಅಭ್ಯರ್ಥಿ ಕಣದಲ್ಲಿ ಇಲ್ಲವೆಂಬ ಅಂಶ ಪ್ರಸನ್ನಕುಮಾರ್ ಆತ್ಮವಿಶ್ವಾಸ ಹೆಚ್ಚಿಸಿದೆ. 2015ರ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂಬ ಅತಿಯಾದ ವಿಶ್ವಾಸದಿಂದ ಬೀಗುತ್ತಿದ್ದ ಬಿಜೆಪಿ ಮೂರನೇ ಸ್ಥಾನಕ್ಕೆ ಕುಸಿದದ್ದು ಆ ಪಕ್ಷದ ಪ್ರಮುಖರಲ್ಲಿ ಇನ್ನೂ ಎಚ್ಚರಿಕೆ ಗಂಟೆಯಾಗಿ ಉಳಿದಿದೆ. ಆರು ತಿಂಗಳ ಹಿಂದೆಯೇ ಚುನಾವಣೆ ಸಿದ್ಧತೆ ಆರಂಭಿಸಿದ್ದ ಕಾಂಗ್ರೆಸ್​ನಲ್ಲಿ ಈ ಬಾರಿ ಒಗ್ಗಟ್ಟಿನ ಕಹಳೆ ಮೊಳಗಿದೆ. ಪ್ರಸನ್ನಕುಮಾರ್​ಗೆ

ಪಕ್ಷದಲ್ಲಿ ಪ್ರತಿಸ್ಪರ್ಧಿಗಳು ಇಲ್ಲದಿರುವ ಕಾರಣ ಒಳಹೊಡೆತಗಳ ಭಯವಿಲ್ಲದೆ ನಿರಾಳರಾಗಿದ್ದಾರೆ. ಜೆಡಿಯು ಅಭ್ಯರ್ಥಿ ಬಿ.ಕೆ.ಶಶಿಕುಮಾರ, ಪಕ್ಷೇತರ ಪಿ.ವೈ.ರವಿ ಮತ ಗಳಿಕೆ ಉಳಿದಿಬ್ಬರ ಫಲಿತಾಂಶದ ಮೇಲೆ ಹೆಚ್ಚು ಪ್ರಭಾವ ಬೀರುವುದಿಲ್ಲ. ಆದರೂ ಹಿಂದಿನ ಚುನಾವಣೆಗಳಿಗಿಂತ ಈ ಬಾರಿ ರೋಚಕ ನೇರ ಹಣಾಹಣಿಗೆ ಪರಿಷತ್ ಚುನಾವಣೆ ಸಾಕ್ಷಿಯಾಗುವುದು ನಿಶ್ಚಿತ. ಎರಡನೇ ಸುತ್ತಿನ ಪ್ರಚಾರದಲ್ಲಿರುವ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳು ಪರಸ್ಪರ ವೈಯಕ್ತಿಕ ಟೀಕೆಗೆ ಇಳಿಯದೆ ಪ್ರಚಾರ ಕಣದ ಗೌರವ ಹೆಚ್ಚಿಸಿರುವುದು ವಿಶೇಷ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆಡಳಿತ ವೈಫಲ್ಯವನ್ನು ಪ್ರಸನ್ನಕುಮಾರ್ ಬೊಟ್ಟು ಮಾಡಿದರೆ, ಬಿಜೆಪಿ ಸರ್ಕಾರದ ಸಾಧನೆಯನ್ನು ಜನರ ಮುಂದಿಡಲು ಅರುಣ್ ಪ್ರಯತ್ನಿಸುತ್ತಿದ್ದಾರೆ.

ಜೆಡಿಎಸ್ ಒಲವು ಯಾರಿಗೆ?: ಜೆಡಿಎಸ್ ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಒಂದು ದಶಕ ಜೆಡಿಎಸ್​ನಲ್ಲಿದ್ದ ಮಧು ಬಂಗಾರಪ್ಪ ಈಗ ಕಾಂಗ್ರೆಸ್ ಜತೆಗಿದ್ದಾರೆ. ಹೀಗಾಗಿ ಶಕ್ತಿ ವೃದ್ಧಿಸಿದೆ ಎಂಬುದು ಕಾಂಗ್ರೆಸ್ ಅಭ್ಯರ್ಥಿಯ ದೃಢವಿಶ್ವಾಸ. ರಾಜ್ಯ ಮಟ್ಟದಲ್ಲಿ ಜೆಡಿಎಸ್ ಪರೋಕ್ಷವಾಗಿ ಮೈತ್ರಿ ಮಾಡಿಕೊಂಡರೂ ಕ್ಷೇತ್ರದಲ್ಲಿ ಅದರ ಪ್ರಭಾವದಿಂದ ಗೆಲುವಿಗೆ ಪೂರಕ ವಾತಾವರಣ ನಿರ್ವಣವಾಗುತ್ತದೆಂಬ ನಂಬಿಕೆ ಬಿಜೆಪಿಯದ್ದು. ಕಳೆದ ಚುನಾವಣೆಯಲ್ಲಿ 1,557 ಮತ ಪಡೆದಿದ್ದ ಜೆಡಿಎಸ್ ಈಗ ಅಷ್ಟೊಂದು ಸಾಮರ್ಥ್ಯ ಉಳಿಸಿಕೊಂಡಿಲ್ಲ ಎಂಬುದು ವಾಸ್ತವ. ಪ್ರಸ್ತುತ 300ಕ್ಕೂ ಹೆಚ್ಚು ಮತದಾರರಿರುವ ಜೆಡಿಎಸ್​ನ ಅಷ್ಟೂ ಮತಗಳು ಸಾರಾಸಗಟಾಗಿ ಒಬ್ಬರಿಗೇ ಸಿಗುವ ಸಾಧ್ಯತೆಗಳು ತುಂಬ ಕಡಿಮೆ.

ಯಾರೇ ಗೆದ್ರೂ ದಾಖಲೆ: ಶಿವಮೊಗ್ಗ ಸ್ಥಳೀಯ ಸಂಸ್ಥೆಗಳಿಂದ ಮೊದಲ ಬಾರಿ ಕಣಕ್ಕಿಳಿದಿರುವ ಬಿಜೆಪಿಯ ಡಿ.ಎಸ್.ಅರುಣ್, ಮರು ಆಯ್ಕೆ ಬಯಸಿರುವ ಆರ್.ಪ್ರಸನ್ನ ಕುಮಾರ್ ಇಬ್ಬರಲ್ಲಿ ಯಾರೇ ಗೆದ್ದರೂ ಕ್ಷೇತ್ರದಲ್ಲಿ ಹೊಸ ದಾಖಲೆಯೊಂದು ಸೃಷ್ಟಿಯಾಗಲಿದೆ. ಇಲ್ಲಿ ಮೊದಲ ಬಾರಿ ಕಣಕ್ಕಿಳಿದವರೇ ಮೇಲ್ಮನೆ ಪ್ರವೇಶಿಸಿದ್ದಾರೆ. ಅರುಣ್ ಗೆದ್ದರೆ ಈ ದಾಖಲೆ ಮುಂದುವರಿದಂತಾಗುತ್ತದೆ. ಆರ್.ಪ್ರಸನ್ನಕುಮಾರ್ ಗೆಲುವು ಸಾಧಿಸಿದರೆ ಈ ಕ್ಷೇತ್ರದಲ್ಲಿ ಮರು ಆಯ್ಕೆ ಬಯಸಿದವರನ್ನು ಮತದಾರರು ಆಶೀರ್ವದಿ ಸುವುದಿಲ್ಲ ಎಂಬ ಅಪವಾದ ದೂರವಾಗಬಹುದು.

ಬದಲಾದ ಸನ್ನಿವೇಶ: 2015ರ ಚುನಾವಣೆ ವೇಳೆ ಶಿವಮೊಗ್ಗ ಸ್ಥಳೀಯ ಸಂಸ್ಥೆ ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ಪೈಕಿ ಶಿಕಾರಿಪುರದಲ್ಲಿ ಮಾತ್ರ ಬಿಜೆಪಿ ಶಾಸಕರಿದ್ದರು. 3 ಕ್ಷೇತ್ರ ಜೆಡಿಎಸ್ ಪಾಲಾಗಿತ್ತು. ಆರು ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದರು. ಪ್ರಸ್ತುತ ಸನ್ನಿವೇಶ ಸಂಪೂರ್ಣ ಬದಲಾಗಿದೆ. ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದರೆ, ಉಳಿದ 9 ಕ್ಷೇತ್ರಗಳು ಬಿಜೆಪಿ ಪಾಲಾಗಿವೆ. ಹಿಂದಿನ ಚುನಾವಣೆ ಸಂದರ್ಭ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೆ, ಈಗ ಬಿಜೆಪಿ ಸರ್ಕಾರವಿದೆ. ಬದಲಾದ ರಾಜಕೀಯ ವಾತಾವರಣ ಯಾರಿಗೆ ಅನುಕೂಲ? ಯಾರಿಗೆ ಪ್ರತಿಕೂಲ ಎಂಬುದನ್ನು ನಿರ್ಣಯಿಸಲಿರುವ ಮತದಾರರು ಗುಟ್ಟು ಬಿಟ್ಟುಕೊಡುತ್ತಿಲ್ಲ.