ಜಿಲ್ಲೆ

ಮತಾಂತರ ಆಗಿಲ್ಲ ಎಂದಿದ್ದ ತಹಶೀಲ್ದಾರ್​ಗೂ ಶಾಕ್​, ಆಗಿದೆ ಎನ್ನುತ್ತಿರುವ ಶಾಸಕರಿಗೂ ಶಾಕ್​!

Webdesk - Ravikanth

ಚಿತ್ರದುರ್ಗ: ಕೋಟೆನಾಡಿನಲ್ಲಿ ಮತಾಂತರ ಪ್ರಕರಣ ಭಾರಿ ಸದ್ದು ಮಾಡುತ್ತಿದ್ದು, ಇದೀಗ ಇದರ ಸದ್ದು ಮತ್ತಷ್ಟು ಹೆಚ್ಚಾಗಿದೆ. ವಿಚಿತ್ರವೆಂದರೆ, ಮತಾಂತರ ಆಗಿಲ್ಲ ಎಂದಿದ್ದ ತಹಶೀಲ್ದಾರ್​ಗೆ ಮಾತ್ರವಲ್ಲ, ಮತಾಂತರ ನಡೆದಿದೆ ಎನ್ನುತ್ತಿರುವ ಶಾಸಕರಿಗೂ ಶಾಕ್ ತಟ್ಟಿದೆ.

ತಮ್ಮ ತಾಯಿಯನ್ನೇ ಮತಾಂತರಗೊಳಿಸಿದ್ದಾರೆ ಎಂದು ಶಾಸಕ ಗೂಳಿಹಟ್ಟಿ ಶೇಖರ್ ಈ ಹಿಂದೆ ದನಿ ಎತ್ತಿದ್ದು, ಬಳಿಕ ಒಂದಷ್ಟು ಜನರನ್ನು ಹಿಂದೂ ಧರ್ಮಕ್ಕೆ ಮರಳಿ ಕರೆ ತಂದಿದ್ದರು. ಅಂದಿನಿಂದ ಜಿಲ್ಲೆಯಲ್ಲಿ ಬಲವಂತದ ಮತಾಂತರ ಪ್ರಕರಣ ಮುನ್ನೆಲೆಗೆ ಬಂದಿದ್ದು, ಚರ್ಚೆಗೆ ಇಂಬು ಕೊಟ್ಟಿದೆ.

ಈ ಮಧ್ಯೆ 'ಬಲವಂತದ ಮತಾಂತರ ನಡೆದಿಲ್ಲ' ಎಂದು ಇಲ್ಲಿನ ತಹಶೀಲ್ದಾರ್ ಹೇಳಿಕೆ ಕೊಟ್ಟ ಬೆನ್ನಿಗೇ ಅವರ ವರ್ಗಾವಣೆ ಆಗಿದೆ. ಆ ಮೂಲಕ ಅವರಿಗೆ ಮತಾಂತರದ ಪ್ರಕರಣದ ಚುರುಕು ಮುಟ್ಟಿತ್ತು. ಮತಾಂತರ ನಡೆದಿದೆ, ನಡೆಯುತ್ತಿದೆ ಎಂದು ಹೇಳುತ್ತಲೇ ಬಂದಿರುವ ಶಾಸಕ ಗೂಳಿಹಟ್ಟಿ ಶೇಖರ್​ ಅವರು ತಹಶೀಲ್ದಾರ್ ವರ್ಗಾವಣೆ ಬಳಿಕ ಮತಾಂತರ ನಡೆಯುತ್ತಿರುವುದನ್ನು ಸಾಬೀತುಪಡಿಸಲು ಕುಟುಕು ಕಾರ್ಯಾಚರಣೆಗೆ ಇಳಿದಿದ್ದಾರೆ.

ಚರ್ಚ್​ವೊಂದರ ಮುಂದೆ ಕಾರಿನಲ್ಲಿ ಕುಳಿತು ಚರ್ಚ್​ನಿಂದ ಹೊರಬರುತ್ತಿರುವವರ ಜತೆ ಶಾಸಕರು ಮಾತುಕತೆ ನಡೆಸಿದ್ದಾರೆ. ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿರುವ ದಲಿತರನ್ನು ಮಾತಿಗೆಳೆದ ಶಾಸಕರು, ಅವರಿಂದಲೇ ಸತ್ಯ ಹೊರಗೆಡಹುವ ಪ್ರಯತ್ನ ನಡೆಸಿದ್ದಾರೆ. ಈ ವೇಳೆ ಕೆಲವರು "ಹೌದು.. ನಾವು ಮತಾಂತರ ಆಗಿದ್ದೇವೆ, ಏನೀಗ..?" ಎಂದು ಶಾಸಕರೇ ಒಮ್ಮೆ ಶಾಕ್​ಗೆ ಒಳಗಾಗುವಂತೆ ಉತ್ತರ ನೀಡಿರುವುದು ಬೆಳಕಿಗೆ ಬಂದಿದೆ. ಅದಾಗ್ಯೂ ಚಿತ್ರದುರ್ಗದಲ್ಲಿ ಮತಾಂತರ ನಡೆದಿದೆ ಎಂದು ಈ ಮೂಲಕ ಸಾಬೀತುಪಡಿಸುವ ಯತ್ನದಲ್ಲಿ ಶಾಸಕ ಗೂಳಿಹಟ್ಟಿ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.